ಫೈನಲ್‌ ಪ್ರವೇಶಿಸಿದ ರವೀಂದರ್‌ ಬುಡಾಪೆಸ್ಟ್‌, ಹಂಗರಿ (ಪಿಟಿಐ): ಅಖಾಡದಲ್ಲಿ ಮಿಂಚಿನ ಸಾಮರ್ಥ್ಯ ತೋರಿದ ಭಾರತದ ರವೀಂದರ್‌, 23 ವರ್ಷದೊಳಗಿನವರ ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ. 61 ಕೆಜಿ ವಿಭಾಗದಲ್ಲಿ 22 ವರ್ಷದ ಪಟು, ಸೆಮಿಫೈನಲ್‌ ಬೌಟ್‌ನಲ್ಲಿ ಯುರೋಪಿಯನ್‌ ಚಾಂಪಿಯನ್‌ ಆರ್ಸೆನ್‌ ಹರುತ್ಯುನಾನ್‌ ಎದುರು ಮಂಗಳವಾರ 4–3ರಿಂದ ಗೆಲುವು ಸಾಧಿಸಿದರು. ಈ ಕುರಿತು ಭಾರತ ಕುಸ್ತಿ ಫೆಡರೇಷನ್‌ ಹೇಳಿಕೆ ನೀಡಿದೆ. ಇದಕ್ಕೂ ಮೊದಲು ಆರಂಭಿಕ ಸುತ್ತಿನಲ್ಲಿ ಅವರು, ಹಂಗರಿಯ ಮಾರ್ಸೆಲ್‌ ಬುಡಾಯ್‌ ಕೊವಾಕ್ಸ್ ಎದುರು 12–1ರಿಂದ, ಬಳಿಕ ಕ್ವಾರ್ಟರ್‌ಫೈನಲ್‌ ಹಣಾಹಣಿಯಲ್ಲಿ ರಷ್ಯಾದ ಡಿನಿಸ್ಲಾಮ್‌ ತಕ್ತರೊವ್‌ ವಿರುದ್ಧ 11–0 ಅಂತರದಿಂದ ಜಯ ಗಳಿಸಿದ್ದರು. ಸೋನಿಪತ್‌ನ ರವೀಂದರ್‌, 2016ರ ದಕ್ಷಿಣ ಏಷ್ಯಾ ಕ್ರೀಡಾಕೂಟದಲ್ಲಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದರು. 2014ರ ಏಷ್ಯನ್‌ ಕೆಡೆಟ್‌ ಚಾಂಪಿಯನ್‌ಷಿಪ್‌ನಲ್ಲಿ ಅವರಿಗೆ ಕಂಚು ಒಲಿದಿತ್ತು. ವೃತ್ತಿಬದುಕಿನ ಶ್ರೇಷ್ಠ ಪದಕದ ನಿರಿಕ್ಷೆಯಲ್ಲಿರುವ ಅವರು, ಬುಧವಾರ ರಾತ್ರಿ ನಡೆಯುವ ಫೈನಲ್‌ ಹಣಾಹಣಿಯಲ್ಲಿ ಕಿರ್ಗಿಸ್ತಾನದ ಉಲುಕ್ಬೆಕ್‌ ಜೊಲ್ಡೊಶ್‌ಬೆಕೊವ್‌ ಎದುರು ಕಣಕ್ಕಿಳಿಯಲಿದ್ದಾರೆ. 74 ಕೆಜಿ ವಿಭಾಗದಲ್ಲಿ ಗೌರವ್‌ ಬಲಿಯಾನ್‌ ರಿಪೇಚ್‌ ಸುತ್ತಿಗೆ ಕಾಲಿಟ್ಟಿದ್ದಾರೆ. ಇಲ್ಲಿ ಅವರು ಅಮೆರಿಕದ ಬ್ರಾಡಿ ಗ್ಯಾರಿ ಬರ್ಗ್‌ ಎದುರು ಸೆಣಸಲಿರುವರು. ಅರ್ಹತಾ ಸುತ್ತಿನಲ್ಲಿ ಗೌರವ್‌, ರಷ್ಯಾದ ರಜಾಂಬೆಕ್‌ ಜಮಲೊವ್‌ ಎದುರು ಸೋತಿದ್ದರು. ಆದರೆ ಜಮಲೊವ್‌ ಫೈನಲ್‌ ತಲುಪಿದ್ದರಿಂದ ಗೌರವ್‌ ಅವರಿಗೆ ಮತ್ತೊಂದು ಅವಕಾಶ ಲಭಿಸಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.