ಕಬಡ್ಡಿ: ಯು ಮುಂಬಾ ಜಯಭೇರಿ ನೋಯ್ಡಾ: ಸಂಘಟಿತ ಸಾಮರ್ಥ್ಯ ಮೆರೆದ ಯು ಮುಂಬಾ ತಂಡ ಪ್ರೊ ಕಬಡ್ಡಿ ಲೀಗ್‌ನ ಶನಿವಾರದ ಪಂದ್ಯದಲ್ಲಿ ಪುಣೇರಿ ಪಲ್ಟನ್ ವಿರುದ್ಧ ಭರ್ಜರಿ ಜಯ ಗಳಿಸಿತು. ಇಲ್ಲಿನ ಶಹೀದ್ ವಿಜಯ ಸಿಂಗ್ ಪಾಠಕ್‌ ಕ್ರೀಡಾ ಸಂಕೀರ್ಣದಲ್ಲಿ ನಡೆದ ಪಂದ್ಯದಲ್ಲಿ ಮುಂಬಾ 31–22ರಿಂದ ಗೆದ್ದಿತು. ಮೂರನೇ ನಿಮಿಷದಿಂದ ಮುನ್ನಡೆ ಗಳಿಸುತ್ತ ಸಾಧಿಸಿದ ಮುಂಬಾಗೆ ಹತ್ತು ನಿಮಿಷಗಳ ನಂತರ ಪುಣೇರಿ ತಿರುಗೇಟು ನೀಡಿತು. ಆದರೆ ಪಟ್ಟು ಬಿಡದ ಮುಂಬಾ ಆಟಗಾರರು ಮೊದಲಾರ್ಧದ ಮುಕ್ತಾಯಕ್ಕೆ 19–10ರ ಮುನ್ನಡೆ ಸಾಧಿಸಿತು. ದ್ವಿತೀಯಾರ್ಧದಲ್ಲಿ ಆರು ಪಾಯಿಂಟ್ ಗಳಿಸಿದ ಪುಣೇರಿ ಲಯ ಕಂಡುಕೊಳ್ಳುವ ಭರವಸೆ ಮೂಡಿಸಿತು. ಆದರೆ ಕೊನೆಯ ಹತ್ತು ನಿಮಿಷಗಳಲ್ಲಿ ಅಮೋಘ ಆಟವಾಡಿದ ಮುಂಬಾ ಪಾಯಿಂಟ್‌ಗಳನ್ನು ಕಬಳಿಸಿ ಗೆಲುವು ಸಾಧಿಸಿತು. ಅಭಿಷೇಕ್ ಸಿಂಗ್‌ ಏಳು, ಸುರೇಂದರ್ ಸಿಂಗ್, ವಿನೋದ್ ಕುಮಾರ್‌ ಮತ್ತು ಫಜಲ್ ಅತ್ರಾಚಲಿ ತಲಾ ನಾಲ್ಕು ಪಾಯಿಂಟ್ ಗಳಿಸಿ ಮುಂಬಾ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದರು. ಪುಣೇರಿ ಪರವಾಗಿ ಜಿ.ಬಿ.ಮೋರೆ ಮತ್ತು ಸಂದೀಪ್ ನರ್ವಾಲ್‌ ಕ್ರಮವಾಗಿ ನಾಲ್ಕು ಮತ್ತು ಮೂರು ಪಾಯಿಂಟ್‌ ಗಳಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.