ಬ್ಯಾಡ್ಮಿಂಟನ್‌: ಪ್ರೀಕ್ವಾಟರ್‌ ಫೈನಲ್‌ಗೆ ಶ್ರೀಕಾಂತ್‌, ಪ್ರಣವ್‌ಗೆ ಆಘಾತ ಫುಜೌ: ಭಾರತದ ಕಿದಂಬಿ ಶ್ರೀಕಾಂತ್‌ ಚೀನಾ ಓಪ‍ನ್‌ ವರ್ಲ್ಡ್‌ ಟೂರ್‌ ಬ್ಯಾಡ್ಮಿಂಟನ್‌ ಟೂರ್ನಿಯ ಪ್ರೀ ಕ್ವಾಟರ್‌ ಫೈನಲ್‌ ಪ್ರವೇಶಿಸಿದ್ದಾರೆ. ಬುಧವಾರ ನಡೆದ ಪುರುಷರ ಸಿಂಗಲ್ಸ್‌ನಲ್ಲಿ ಶ್ರೀಕಾಂತ್‌, 21–12. 21–16 ರಿಂದ ಫ್ರಾನ್ಸ್‌ನ ಲೂಕಸ್‌ ಕಾರ್ವಿ ಅವರನ್ನು ಮಣಿಸಿದರು. ಈ ಹೋರಾಟ 35 ನಿಮಿಷಗಳ ಕಾಲ ನಡೆಯಿತು. ವಿಶ್ವದ 42ನೇ ಶ್ರೇಯಾಂಕದ ಆಟಗಾರ ಕಾರ್ವಿ ಅವರಿಗೆ ಆರಂಭದಿಂದಲೇ ಕಠಿಣ ಸವಾಲೊಡ್ಡಿದ ಶ್ರೀಕಾಂತ್‌ ಮೊದಲ ಗೇಮ್‌ನಲ್ಲಿಯೇ ಮುನ್ನಡೆ ಸಾಧಿಸಿದರು. ಎರಡನೇ ಗೇಮ್‌ನಲ್ಲಿ ಶ್ರೀಕಾಂತ್ ಮತ್ತು ಕಾರ್ವಿ ಸಮಬಲ ಸಾಧಿಸಿದರು. ಉತ್ತಮ ಸರ್ವ್‌ ಮತ್ತು ಸ್ಮ್ಯಾಷ್‌ಗಳ ಮೂಲಕ 11–9 ರಿಂದ ಕಾರ್ವಿ ಅವರನ್ನು ಹಿಂದಿಕ್ಕುವಲ್ಲಿ ಸಫಲರಾದರು. ಪ್ರೀ ಕ್ವಾಟರ್‌ ಫೈನಲ್‌ ಪಂದ್ಯದಲ್ಲಿ ಶ್ರೀಕಾಂತ್‌ ಇಂಡೋನೇಷ್ಯಾದ ಟಾಮಿ ಸುಗಿಯಾರ್ತೊ ಅವರನ್ನು ಎದುರಿಸಲಿದ್ದಾರೆ. ಭಾರತದ ಎಚ್‌.ಎಸ್‌.ಪ್ರಣಯ್‌,11–21, 14–21 ನೇರ ಗೇಮ್‌ಗಳಿಂದಇಂಡೋನೇಷ್ಯಾದ ಜೊನಾಥನ್‌ ಕ್ರಿಸ್ಟಿ ಎದುರು ಸೋಲನುಭವಿಸಿದ್ದಾರೆ. ಮಹಿಳೆಯರಿಗೆ ಹಿನ್ನಡೆ: ಮಹಿಳೆಯರ ಸಿಂಗಲ್ಸ್‌ನಲ್ಲಿ ಭಾರತದ ವೈಷ್ಣವಿ ರೆಡ್ಡಿ ಜಕ್ಕ, 12–21, 16–21 ರಿಂದ ಥಾಯ್ಲೆಂಡ್‌ನ ಪಾರ್ನ್‌ಪಾವೆ ಚೊಚುವಾಂಗ್‌ ಎದುರು ಆಘಾತ ಅನುಭವಿಸಿದರು. ಮಿಶ್ರ ಡಬಲ್ಸ್‌ನಲ್ಲಿ ಅಶ್ವಿನಿ ಪೊನ್ನಪ್ಪ ಮತ್ತು ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ 21–18, 19–21, 17–21ರಿಂದ ಮಲೇಷ್ಯಾದ ಚಾನ್‌ ಪೆಂಗ್‌ ಸೂನ್‌ ಮತ್ತು ಗೌಹ ಲಿಹು ಯಿಂಗ್‌ ಎದುರು ನಿರಾಸೆ ಅನುಭವಿಸಿದರು. ಮಂಗಳವಾರ ನಡೆದ ಪಂದ್ಯದಲ್ಲಿ ಪಿ.ವಿ. ಸಿಂಧು ಪ್ರೀ ಕ್ವಾಟರ್‌ ಫೈನಲ್‌ಗೆ ಪ್ರವೇಶಿಸಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.