ಹಾಂಕಾಂಗ್ ಓಪನ್‌ ಬ್ಯಾಡ್ಮಿಂಟನ್ ಟೂರ್ನಿ: ಶ್ರೀಕಾಂತ್‌, ಸಮೀರ್‌ ವರ್ಮಾಗೆ ನಿರಾಸೆ ಕೊವ್ಲೂನ್‌, ಹಾಂಕಾಂಗ್‌: ಕಿದಂಬಿ ಶ್ರೀಕಾಂತ್‌ ಮತ್ತು ಸಮೀರ್ ವರ್ಮಾ ಅವರ ಸೋಲಿನೊಂದಿಗೆ ಹಾಂಕಾಂಗ್ ಓಪನ್‌ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಸವಾಲು ಮುಕ್ತಾಯಗೊಂಡಿದೆ. ಶುಕ್ರವಾರ ನಡೆದ ಪುರುಷರ ಸಿಂಗಲ್ಸ್‌ ಪಂದ್ಯದಲ್ಲಿ ಕಿದಂಬಿ ಶ್ರೀಕಾಂತ್‌ ಜಪಾನ್‌ನ ಕೆಂಟಾ ನಿಶಿಮೊಟೊ ಅವರಿಗೆ 17–21, 13–21ರಿಂದ ಮಣಿದರು. ಸಮೀರ್ ವರ್ಮಾ ಸ್ಥಳೀಯ ಆಟಗಾರ ಲೀ ಚೂಕ್ ಯೂ ಎದುರು ಸೋತರು. ಶ್ರೀಕಾಂತ್‌ ಈ ಹಿಂದೆ ಮೂರು ಬಾರಿ ಜಪಾನ್ ಆಟಗಾರನ ವಿರುದ್ಧ ಸೆಣಸಿದ್ದು ಮೂರು ಪಂದ್ಯಗಳಲ್ಲೂ ಗೆದ್ದಿದ್ದರು. ಇಲ್ಲಿ ನಾಲ್ಕನೇ ಶ್ರೇಯಾಂಕ ಹೊಂದಿದ್ದ ಶ್ರೀಕಾಂತ್‌ ಭರವಸೆಯಿಂದಲೇ ಕಣಕ್ಕೆ ಇಳಿದಿದ್ದರು. ಅದರೆ ಅವರ ನಿರೀಕ್ಷೆ ಕೈಗೂಡಲಿಲ್ಲ. ಆರಂಭದಲ್ಲೇ ಪಾಯಿಂಟ್‌ಗಳನ್ನು ಕಲೆ ಹಾಕುತ್ತ ಮುನ್ನಡೆ ಉಳಿಸಿಕೊಂಡ ನಿಶೀಮೊಟೊ ವಿರಾಮದ ವೇಳೆ 11–7ರಿಂದ ಮುಂದಿದ್ದರು. ನಂತರ ಛಲದಿಂದ ಕಾದಾಡಿದ ಶ್ರೀಕಾಂತ್‌ ಒಂದು ಹಂತದಲ್ಲಿ 14–13ರ ಮುನ್ನಡೆ ಸಾಧಿಸಿದರು. ಆದರೆ ನಿರಂತರ ನಾಲ್ಕು ಪಾಯಿಂಟ್ ಗಳಿಸಿದ ಜಪಾನ್ ಆಟಗಾರ ನಂತರ ಗೇಮ್‌ ಗೆದ್ದು ಸಂಭ್ರಮಿಸಿದರು. ಎರಡನೇ ಗೇಮ್‌ನಲ್ಲಿ ಶ್ರೀಕಾಂತ್‌ ನಿರೀಕ್ಷಿತ ಸಾಮರ್ಥ್ಯ ತೋರಲು ವಿಫಲರಾದರು. ಆರಂಭದಲ್ಲಿ 2–6 ಹಿನ್ನಡೆ ಅನುಭವಿಸಿದ ಅವರು ನಂತರ 3–13ರಿಂದ ಹಿಂದೆ ಉಳಿದರು. ಹೀಗಾಗಿ ಎದುರಾಳಿ ಆಟಗಾರ ಸುಲಭ ಗೆಲುವು ಸಾಧಿಸಿದರು. ಸಮೀರ್ ವರ್ಮಾ ಮತ್ತು ಲೀ ಚೂಕ್‌ ನಡುವಿನ ಹೋರಾಟದ ಮೊದಲ ಎರಡು ಗೇಮ್‌ಗಳು ರೋಚಕವಾಗಿದ್ದವು. ಆದರೆ ಚೊಚ್ಚಲ ಸೆಮಿಫೈನಲ್‌ ಪಂದ್ಯದ ಮೇಲೆ ಆಸೆ ಇರಿಸಿ ಬಂದಿದ್ದ ಸಮೀರ್‌ 21–15, 19–21, 21–11ರಿಂದ ಸೋತರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.