ಮಹಿಳೆಯರ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಷಿಪ್‌: ಕ್ರಿಸ್ಟಿನಾಗೆ ಮನೀಷಾ ‘ಗುದ್ದು’ ನವದೆಹಲಿ: ಬಾಕ್ಸಿಂಗ್ ರಿಂಗ್‌ನಲ್ಲಿ ಮಗಳು ಕಾದಾಡುತ್ತಿದ್ದರೆ, ಗ್ಯಾಲರಿಯಲ್ಲಿ ಕುಳಿತಿದ್ದ ತಾಯಿ ಭಾವುಕಳಾಗಿದ್ದಳು. ಮಗಳ ಮುಖದ ಮೇಲೆ ಗುದ್ದು ಬಿದ್ದಾಗಲೆಲ್ಲ ಬೆಚ್ಚಿ ಬೀಳುತ್ತಿದ್ದಳು ಆಕೆ. ಆದರೆ ಮಗಳು ತಿರುಗೇಟು ನೀಡುತ್ತಿದ್ದಾಗ ಆಕೆಯ ಮುಖದಲ್ಲಿ ಸಂತಸ ಮೂಡುತ್ತಿತ್ತು. ಇಲ್ಲಿ ನಡೆಯುತ್ತಿರುವ ಮಹಿಳೆಯರ ವಿಶ್ವ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಅಮೆರಿಕದ ಕ್ರಿಸ್ಟಿನಾ ಕ್ರೂಸ್ ಅವರನ್ನು ಮಣಿಸಿದ ಮನೀಷಾ ಮೋನ್‌ ಅವರ ಬೌಟ್ ವೀಕ್ಷಿಸಿದ ತಾಯಿ ಉಷಾ ರಾಣಿ ಮೋನ್‌ ಬೌಟ್‌ನ ಕೊನೆಯಲ್ಲಿ ಸಂಭ್ರಮದ ಅಲೆಯಲ್ಲಿ ತೇಲಿದರು. ಅಜ್ಜಿ ಸರೋಜ್ ದೇವಿ ಕೂಡ ಬೌಟ್ ವೀಕ್ಷಿಸಿದರು. 2016ರ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗೆದ್ದಿದ್ದ ಕ್ರಿಸ್ಟಿನಾ ಅವರೊಂದಿಗಿನ ಭಾರತದ ಬಾಕ್ಸರ್‌ನ ಹಣಾಹಣಿ ತೀವ್ರ ಕುತೂಹಲ ಕೆರಳಿಸಿತ್ತು. ಆದರೆ ಎದುರಾಳಿಯ ದಾಳಿಗೆ ಬೆದರದೆ ದಿಟ್ಟ ಹೋರಾಟ ನಡೆಸಿದ ಮನೀಷ ಗೆದ್ದು ಪ್ರೀ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇರಿಸಿದರು. ಹರಿಯಾಣದ ಕೈತಾಲ್‌ ಗ್ರಾಮದಿಂದ ಬಂದಿದ್ದ ಉಷಾ ರಾಣಿ ‘ಇದು ಪರಸ್ಪರ ಗುದ್ದುತ್ತ ಕಾದಾಡುವ ಕ್ರೀಡೆ. ಆದ್ದರಿಂದ ಮನೀಷಾ ರಿಂಗ್‌ನಲ್ಲಿದ್ದಾಗಲೆಲ್ಲ ನಮಗೆ ಆತಂಕ ಕಾಡುತ್ತಿರುತ್ತದೆ. ಗೆದ್ದಾಗ ಖುಷಿಯಾಗುತ್ತದೆ’ ಎಂದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.