ಬ್ಯಾಸ್ಕೆಟ್‌ಬಾಲ್‌: ರಾಜ್‌ಮಹಲ್ ತಂಡಕ್ಕೆ ಜಯ ‌ಬೆಂಗಳೂರು: ಅಮೋಘ ಆಟವಾಡಿದ ಕಿಶನ್‌ 14 ಪಾಯಿಂಟ್‌ಗಳೊಂದಿಗೆ ಮಿಂಚಿದರು. ಇದರಿಂದಾಗಿ ರಾಜ್‌ಮಹಲ್ ಬ್ಯಾಸ್ಕೆಟ್‌ಬಾಲ್ ಕ್ಲಬ್‌ ತಂಡ ರಾಜ್ಯ ಅಸೋಸಿಯೇಷನ್ ಕಪ್‌ ಬ್ಯಾಸ್ಕೆಟ್‌ಬಾಲ್‌ ಟೂರ್ನಿಯಲ್ಲಿ ಭಾನುವಾರ ಭರ್ಜರಿ ಜಯ ಗಳಿಸಿತು. ಕಂಠೀರವ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ರಾಜ್‌ಮಹಲ್ ತಂಡ ಒರಾಯನ್ಸ್‌ ಬ್ಯಾಸ್ಕೆಟ್‌ಬಾಲ್‌ ಕ್ಲಬ್ ಎದುರು 62–26ರಿಂದ ಗೆದ್ದಿತು. ಒರಾಯನ್ಸ್ ಪರ ಸ್ಮರಣ್‌ 10 ಪಾಯಿಂಟ್ ಕಲೆ ಹಾಕಿದರು. ಬಿಎಸ್‌ಎನ್‌ಎಲ್‌ ತಂಡ 58–57ರಿಂದ ಎನ್‌ಜಿವಿಬಿಸಿಯನ್ನು ಮಣಿಸಿತು. ಕೆಎಸ್‌ಪಿ, 61–52ರಿಂದ ವಿಮಾನಪುರ ತಂಡವನ್ನು ಸೋಲಿಸಿತು. ಕೆಎಸ್‌ಪಿಗಾಗಿ ಲಕ್ಷ್ಮಣ್‌ 20 ಪಾಯಿಂಟ್ ಗಳಿಸಿದರು. ಸಹಕಾರನಗರ ಬ್ಯಾಸ್ಕೆಟ್‌ಬಾಲ್ ಕ್ಲಬ್‌ ತಂಡ 51–27ರಿಂದ ಡಿಆರ್‌ಡಿಒ ತಂಡವನ್ನು ಸೋಲಿಸಿತು. ಸಹಕಾರನಗರ ತಂಡದ ಪರ ಸನತ್‌ 21, ಪವನ್‌ 19 ಪಾಯಿಂಟ್‌ ಗಳಿಸಿದರು. ಹಲಸೂರು ಎಸ್‌ಯು ತಂಡ 54–18ರಿಂದ ಕನಕ ತಂಡವನ್ನು ಸೋಲಿಸಿತು. ರಾಜೇಶ್ವರ್‌ 22 ಪಾಯಿಂಟ್‌ ಗಳಿಸಿ ಹಲಸೂರು ತಂಡದ ಪರ ಮಿಂಚಿದರು. ಡ್ಯಾನಿಷ್‌ (23) ಅವರ ಉತ್ತಮ ಆಟದ ನೆರವಿನಿಂದ ಭರತ್ ಎಸ್‌ಯು ತಂಡ 52–34ರಿಂದ ಸಿಜೆಸಿ ವಿರುದ್ಧ ಗೆದ್ದಿತು. ಅಬಕಾರಿ ಇಲಾಖೆ ತಂಡ 75–38ರಿಂದ ಪಿನಾಕಿನಿ ತಂಡವನ್ನು ಮಣಿಸಿತು. ಅಬಕಾರಿ ಇಲಾಖೆಗಾಗಿ ಅಭಿಷೇಕ್‌ 21 ಮತ್ತು ಪಿನಾಕಿನಿಗಾಗಿ ಮಣಿ 21 ಪಾಯಿಂಟ್ ಗಳಿಸಿದರು. ಸಿಎಂಪಿ, 50–42ರಿಂದ ಯಂಗ್‌ಬುಲ್ಸ್‌ ತಂಡವನ್ನು ಮಣಿಸಿತು. ಯಂಗ್‌ ಬುಲ್ಸ್‌ನ ಆಶ್ರಯ್‌ 25 ಪಾಯಿಂಟ್ ಗಳಿಸಿದರು. ರಾಜ್‌ಕುಮಾರ್ ಬಿ.ಸಿ, 62–54ರಿಂದ ಒಮೇಗಾ ಬಿ.ಸಿ ಎದುರು ಗೆದ್ದಿತು. ರಾಜ್‌ಕುಮಾರ್‌ಗಾಗಿ ಅಶುತೋಷ್‌ 28, ಒಮೇಗಾ ಪರವಾಗಿ ಅವಿನ್‌ 24 ಪಾಯಿಂಟ್ ಕಲೆ ಹಾಕಿದರು. ಮಹಿಳಾ ವಿಭಾಗದಲ್ಲಿ ಯಂಗ್ ಒರಾಯನ್ಸ್ ತಂಡ 78–73ರಿಂದ ರಾಜ್‌ಮಹಲ್ ಎದುರು ಗೆದ್ದಿತು. ಮಧುರವಾಣಿ ಅವರು ಒರಾಯನ್ಸ್‌ಗಾಗಿ 42, ಸಂಧ್ಯಾ 20, ರಾಜ್‌ಮಹಲ್‌ಗಾಗಿ ಗ್ರೀಷ್ಮ 38 ಪಾಯಿಂಟ್ ಗಳಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.