ಪ್ರೊ ಕಬಡ್ಡಿ: ಟೈಟನ್ಸ್‌–ತಲೈವಾಸ್‌ ಸೆಣಸು ಅಹಮದಾಬಾದ್‌: ವಿಶಾಲ್‌ ಭಾರದ್ವಾಜ್‌ ಸಾರಥ್ಯದ ತೆಲುಗು ಟೈಟನ್ಸ್‌ ತಂಡ ಪ್ರೊ ಕಬಡ್ಡಿ ಲೀಗ್‌ (ಪಿಕೆಎಲ್‌) ಆರನೇ ಆವೃತ್ತಿಯ ಮಂಗಳವಾರದ ಪಂದ್ಯದಲ್ಲಿ ತಮಿಳ್‌ ತಲೈವಾಸ್‌ ತಂಡವನ್ನು ಮಣಿಸುವ ವಿಶ್ವಾಸದಲ್ಲಿದೆ. ದಿ ಅರೇನಾ ಬೈ ಟ್ರಾನ್ಸ್‌ಸ್ಟೇಡಿಯಾದಲ್ಲಿ ನಡೆಯುವ ಈ ‍ಪೈಪೋಟಿ ಉಭಯ ತಂಡಗಳ ಪಾಲಿಗೂ ಮಹತ್ವದ್ದೆನಿಸಿದೆ. ತಲೈವಾಸ್‌ ತಂಡ ಈ ಬಾರಿ ಆಡಿರುವ 11 ಪಂದ್ಯಗಳ ಪೈಕಿ ಕೇವಲ ಮೂರರಲ್ಲಿ ಗೆದ್ದಿದೆ. ಅಜಯ್‌ ಠಾಕೂರ್‌ ಪಡೆ ‘ಬಿ’ ಗುಂಪಿನ ಪಾಯಿಂಟ್ಸ್‌ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಟೈಟನ್ಸ್‌ ತಂಡ ಒಂಬತ್ತು ಪಂದ್ಯಗಳಲ್ಲಿ ಸೆಣಸಿದ್ದು, ಐದರಲ್ಲಿ ಗೆದ್ದು 30 ಪಾಯಿಂಟ್ಸ್‌ ಗಳಿಸಿದೆ. ಈ ತಂಡ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಹೊಂದಿದೆ. ತಲೈವಾಸ್‌ ತಂಡದಲ್ಲಿ ಮಂಜೀತ್‌ ಚಿಲ್ಲಾರ, ಅಮಿತ್‌ ಹೂಡಾ, ಜಸ್ವೀರ್‌ ಸಿಂಗ್‌ ಮತ್ತು ಸುಖೇಶ್‌ ಹೆಗ್ಡೆ ಅವರಂತಹ ಅನುಭವಿ ಆಟಗಾರರಿದ್ದಾರೆ. ಹೀಗಿದ್ದರೂ ತಂಡ ಪರಿಣಾಮಕಾರಿ ಸಾಮರ್ಥ್ಯ ತೋರಲು ವಿಫಲವಾಗುತ್ತಿದೆ. ಹಿಂದಿನ ಪಂದ್ಯದಲ್ಲಿ ಪುಣೇರಿ ಪಲ್ಟನ್‌ ಎದುರು ಗೆದ್ದಿದ್ದ ಟೈಟನ್ಸ್‌ ವಿಶ್ವಾಸದಿಂದ ಬೀಗುತ್ತಿದೆ. ರಾಹುಲ್‌ ಚೌಧರಿ, ನೀಲೇಶ್‌ ಸಾಳಂಕೆ, ಸೋಮವೀರ್‌ ಮತ್ತು ಕೃಷ್ಣ ಮದಾನೆ ಅವರು ಈ ತಂಡದ ಶಕ್ತಿಯಾಗಿದ್ದಾರೆ. ದಿನದ ಇನ್ನೊಂದು ಪಂದ್ಯದಲ್ಲಿ ಗುಜರಾತ್‌ ಫಾರ್ಚೂನ್‌ಜೈಂಟ್ಸ್‌ ಮತ್ತು ದಬಂಗ್‌ ಡೆಲ್ಲಿ ತಂಡಗಳು ಹೋರಾಡಲಿವೆ. ‘ಎ’ ಗುಂಪಿನ ಪಾಯಿಂಟ್ಸ್‌ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಫಾರ್ಚೂನ್‌ಜೈಂಟ್ಸ್‌, ಸುಲಭ ಗೆಲುವಿನ ನಿರೀಕ್ಷೆಯಲ್ಲಿದೆ. ಇಂದಿನ ಪಂದ್ಯಗಳು ತಮಿಳ್‌ ತಲೈವಾಸ್‌– ತೆಲುಗು ಟೈಟನ್ಸ್‌ ಆರಂಭ: ರಾತ್ರಿ 8 ಗುಜರಾತ್‌ ಫಾರ್ಚೂನ್‌ಜೈಂಟ್ಸ್‌–ದಬಂಗ್‌ ಡೆಲ್ಲಿ ಆರಂಭ: ರಾತ್ರಿ 9 ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.