‘ಚಿನ್ನ’ಕ್ಕೆ ಗುರಿಯಿಟ್ಟ ಹುಬ್ಬಳ್ಳಿಯ ಜ್ಯೋತಿ ಹುಬ್ಬಳ್ಳಿ: ಪ್ಯಾರಾ ಶೂಟರ್ ಜ್ಯೋತಿ ಸಣ್ಣಕ್ಕಿ ಅವರು ಕೇರಳದ ತಿರುವನಂತಪುರದಲ್ಲಿ ಮಂಗಳವಾರ ನಡೆದ 62ನೇ ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಜಯಿಸಿದ್ದಾರೆ. ಎಸ್‌ಎಚ್‌–1 ವಿಭಾಗದ 10 ಮೀಟರ್‌ ಏರ್ ರೈಫಲ್‌ ಸ್ಟ್ಯಾಂಡಿಂಗ್ ಸ್ಪರ್ಧೆಯಲ್ಲಿ ಜ್ಯೋತಿ ಈ ಸಾಧನೆ ಮಾಡಿದ್ದಾರೆ. ಅಂತರರಾಷ್ಟ್ರೀಯ ಮಟ್ಟದ ಶೂಟಿಂಗ್ ಸ್ಪರ್ಧೆಗೆ ಅರ್ಹತೆ ಪಡೆದುಕೊಳ್ಳಲು ಒಟ್ಟು 400ಕ್ಕೆ 350 ಅಂಕಗಳನ್ನು ಗಳಿಸಬೇಕಿತ್ತು. ಅವರು 379.2 ಅಂಕ ಗಳಿಸಿ ಅಂತರರಾಷ್ಟ್ರೀಯ ಟೂರ್ನಿಯ ಅರ್ಹತೆ ಜೊತೆಗೆ ಚಿನ್ನವನ್ನೂ ಬಾಚಿಕೊಂಡರು. ನಗರದಲ್ಲಿ ಅವರು ಹುಬ್ವಳ್ಳಿ ಸ್ಪೋರ್ಟ್ಸ್‌ ಶೂಟಿಂಗ್ ಅಕಾಡೆಮಿಯಲ್ಲಿ ರವಿಚಂದ್ರ ಬಾಲೆಹೊಸುರ ಬಳಿ ತರಬೇತಿ ಪಡೆಯುತ್ತಿದ್ದಾರೆ. ಬಾಲ್ಯದಲ್ಲಿ ಪೋಲಿಯೊ ಪೀಡಿತರಾಗಿ ಎಡಗಾಲಿನ ಸ್ವಾಧೀನ ಕಳೆದುಕೊಂಡ ಜ್ಯೋತಿ, 2011ರಲ್ಲಿ ಹುಬ್ಬಳ್ಳಿಯಲ್ಲಿ ನಡೆದ ಅಪಘಾತದಲ್ಲಿ ಬಲಗಾಲಿನ ಸ್ವಾಧೀನ ಕೂಡ ಕಳೆದುಕೊಂಡರು. ಇದರಿಂದ ಅವರಿಗೆ ಸೊಂಟ ಭಾಗದಿಂದ ಕಾಲಿನ ತನಕ ಶಕ್ತಿಯಿಲ್ಲ. ಸ್ವತಂತ್ರವಾಗಿ ಓಡಾಡಲು ಆಗುವುದಿಲ್ಲ. ಈ ವೈಕಲ್ಯ ಅವರ ಸಾಧನೆಗೆ ಅಡ್ಡಿಯಾಗಿಲ್ಲ. ರಾಜ್ಯಮಟ್ಟದ ಶೂಟಿಂಗ್‌ ಚಾಂಪಿಯನ್‌ಷಿಪ್‌ಗಳಲ್ಲಿ ಎರಡು ಮತ್ತು ಇದೇ ವರ್ಷ ಮೈಸೂರು ದಸರಾ ಟೂರ್ನಿಯಲ್ಲಿ ಒಂದು ಚಿನ್ನದ ಪದಕ ಗೆದ್ದಿದ್ದರು. ಚೆನ್ನೈನಲ್ಲಿ ನಡೆದಿದ್ದ 2017 ಮತ್ತು 2018ನೇ ಸಾಲಿನ ದಕ್ಷಿಣ ವಲಯದ ಟೂರ್ನಿಯಲ್ಲಿಯೂ ಚಿನ್ನಕ್ಕೆ ಮುತ್ತಿಕ್ಕಿದ್ದರು. ಈಗ ತಿರುವನಂತಪುರದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಟೂರ್ನಿಗೆ ಆಯ್ಕೆಯಾಗಲು ದೆಹಲಿಯಲ್ಲಿ ಅರ್ಹತಾ ಸುತ್ತು ನಡೆದಿತ್ತು. ಆಗ ಅವರು ಒಟ್ಟು 400ಕ್ಕೆ 400 ಅಂಕಗಳನ್ನು ಗಳಿಸಿದ್ದರು! ‘ಸ್ವತಂತ್ರವಾಗಿ ಓಡಾಡುವಷ್ಟು ಶಕ್ತಿ ನನ್ನಲ್ಲಿಲ್ಲ. ಸೊಂಟ ಭಾಗದಿಂದ ಕಾಲಿನ ತನಕ ಸುಮಾರು 70ರಿಂದ 80 ಹೊಲಿಗೆ ಹಾಕಿದ್ದಾರೆ. ಮೊದಲಿನಿಂದಲೂ ನನಗೆ ಶೂಟಿಂಗ್‌ನಲ್ಲಿ ಆಸಕ್ತಿ ಇರುವ ಕಾರಣ ಈ ವೈಕಲ್ಯ ಸಮಸ್ಯೆಯೇ ಅನಿಸಲಿಲ್ಲ’ ಎಂದು ಜ್ಯೋತಿ ಹೇಳಿದರು. ‘ಹೋದ ವರ್ಷ ಕೂಡ ತಿರುವನಂತಪುರದಲ್ಲಿಯೇ ರಾಷ್ಟ್ರೀಯ ಟೂರ್ನಿ ನಡೆದಿತ್ತು. ಆಗ ನಮ್ಮ ವಿಭಾಗದಿಂದ 13 ಶೂಟರ್‌ಗಳು ಭಾಗವಹಿಸಿದ್ದರು. ನಾನು ಕೊನೆಯ ಸ್ಥಾನ ಪಡೆದಿದ್ದೆ. ಆದ್ದರಿಂದ ಈ ಬಾರಿ ಪದಕ ಗೆಲ್ಲಲೇಬೇಕು ಎನ್ನುವ ಛಲದಿಂದ ಕಠಿಣ ಅಭ್ಯಾಸ ಮಾಡಿದ್ದೆ. ಆದ್ದರಿಂದ ನನ್ನ ಆಸೆ ಈಡೇರಿಸಿಕೊಳ್ಳಲು ಸಾಧ್ಯವಾಯಿತು. ನನ್ನೆಲ್ಲ ಕನಸುಗಳಿಗೆ ಅಪ್ಪ ಹನುಮಂತಪ್ಪ ಮತ್ತು ಅಮ್ಮ ಕಲಾವತಿ ಆಸರೆಯಾಗಿದ್ದಾರೆ’ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯಲ್ಲಿ ಮೇಲ್ವಿಚಾರಕಿಯಾಗಿರುವ ಜ್ಯೋತಿ ಹೇಳಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.