ಕಬಡ್ಡಿ: ಪೈರೇಟ್ಸ್ ಜಯಭೇರಿ ಅಹಮ್ಮದಾಬಾದ್‌: ರೈಡ ರ್‌ಗಳು ಮಿಂಚಿನ ಪಂದ್ಯದಲ್ಲಿ ಪಟ್ನಾ ಪೈರೇಟ್ಸ್‌ ತಂಡ ತಮಿಳ್ ತಲೈವಾಸ್‌ ವಿರುದ್ಧ ಭರ್ಜರಿ ಜಯ ಸಾಧಿಸಿತು. ಇಲ್ಲಿನ ದಿ ಅರೆನಾ ಬೈ ಟ್ರಾನ್ಸ್‌ಸ್ಟೇಡಿಯಾದಲ್ಲಿ ಬುಧವಾರ ರಾತ್ರಿ ನಡೆದ ಪ್ರೊ ಕಬಡ್ಡಿ ಟೂರ್ನಿಯ ‘ಬಿ’ ವಲಯದ ಪಂದ್ಯದಲ್ಲಿ ಪೈರೇಟ್ಸ್‌ 45–27ರಿಂದ ಗೆದ್ದಿತು. 13 ಪಾಯಿಂಟ್‌ ಗಳಿಸಿದ ಪ್ರದೀಪ್ ನರ್ವಾಲ್‌ ಅವರು ಎದುರಾಳಿ ತಂಡ ದವರನ್ನು ಕಂಗೆಡಿಸಿದರು. ಅವರಿಗೆ ಉತ್ತಮ ಬೆಂಬಲ ನೀಡಿದ ದೀಪಕ್‌ ನರ್ವಾಲ್‌ 10 ಪಾಯಿಂಟ್‌ ಗಳಿಸಿ ಮಿಂಚಿದರು. ಮಂಜೀತ್ ಎಂಟು ಪಾಯಿಂಟ್‌ ಗಳಿಸಿದರು. ಪ್ರದೀಪ್‌ ನರ್ವಾಲ್‌ ಒಂಬತ್ತು ಬಾರಿ ‘ಸೂಪರ್‌ ಟೆನ್‌’ ಸಾಧನೆ ಮಾಡಿದರು. ತಲೈವಾಸ್‌ ನಾಯಕ ಅಜಯ್ ಠಾಕೂರ್‌ ಏಕಾಂಗಿ ಹೋರಾಟ ನಡೆಸಿ ಎಂಟು ಪಾಯಿಂಟ್ ಗಳಿಸಿದರು.ಮತ್ತೊಂದು ಪಂದ್ಯದಲ್ಲಿ ಗುಜರಾತ್‌ ಫಾರ್ಚೂನ್‌ಜೈಂಟ್ಸ್‌ 39–35ರಿಂದ ಯು ಮುಂಬಾವನ್ನು ಮಣಿಸಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.