ಸೈನಾ, ಕಶ್ಯಪ್‌ಗೆ ಗೆಲುವು ಲಖನೌ: ಭಾರತದ ಸೈನಾ ನೆಹ್ವಾಲ್ ಮತ್ತು ಪರುಪಳ್ಳಿ ಕಶ್ಯಪ್‌ ಇಲ್ಲಿ ನಡೆಯುತ್ತಿರುವ ಸೈಯದ್ ಮೋದಿ ವಿಶ್ವ ಟೂರ್‌ ಸೂಪರ್‌ 300 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದಾರೆ. ಮೊದಲ ಸುತ್ತಿನ ಪಂದ್ಯಗಳಲ್ಲಿ ಇವರಿಬ್ಬರು ಕ್ರಮವಾಗಿ ಮೌರಿಷಸ್‌ನ ಕಾಟೆ ಫೂ ಕೂನೆ ಎದುರು ಮತ್ತು ಥಾಯ್ಲೆಂಡ್‌ನ ತನೋನ್ಸಕ್‌ ಸೈಸೊಂಬೊಸುಕ್‌ ಅವರನ್ನು ಮಣಿಸಿದರು. ಆದರೆ ಮಿಶ್ರ ಡಬಲ್ಸ್‌ನ ಕಳೆದ ಬಾರಿಯ ಚಾಂಪಿಯನ್‌ ಪ್ರಣವ್‌ ಜೆರಿ ಚೋಪ್ರಾ ಮತ್ತು ಎನ್‌.ಸಿಕ್ಕಿ ರೆಡ್ಡಿ ಮೊದಲ ಸುತ್ತಿನಲ್ಲೇ ಸೋತು ಹೊರಬಿದ್ದರು. ಅಶ್ವಿನಿ ಪೊನ್ನಪ್ಪ ಮತ್ತು ಸಾತ್ವಿಕ್ ಸಾಯಿರಾಜ್‌ ರಣಕಿರೆಡ್ಡಿ ಮುಂದಿನ ಹಂತಕ್ಕೆ ಲಗ್ಗೆ ಇರಿಸಿದರು. ಮೂರು ಪ್ರಶಸ್ತಿ ಗೆದ್ದಿದ್ದ ಸೈನಾ ಈ ಬಾರಿ ಎರಡನೇ ಶ್ರೇಯಾಂಕ ಹೊಂದಿದ್ದರು. ಅವರು ಕೂನೆ ಅವರನ್ನು 21–10, 21–10ರಿಂದ ಮಣಿಸಿದರು. ಕಶ್ಯಪ್‌ ಥಾಯ್ಲೆಂಡ್‌ನ ಆಟಗಾರನನ್ನು 21–14, 21–12ರಿಂದ ಸೋಲಿಸಿದರು. ಪುರುಷರ ಸಿಂಗಲ್ಸ್‌ನ ಮತ್ತೊಂದು ಪಂದ್ಯದಲ್ಲಿ ಸಾಯಿ ಪ್ರಣೀತ್‌ ರಷ್ಯಾದ ಸರ್ಜಿ ಸಿರಾಂತ್ ಅವರನ್ನು 21–12, 21–10ರಿಂದ ಸೋಲಿಸಿದರು. ಶುಭಂಕರ್ ಡೇ ಸ್ವೀಡನ್‌ನ ಫೆಲಿಕ್ಸ್‌ ಬುರೆಸ್ಟೆಡ್‌ ಅವರನ್ನು 21–15, 21–13ರಿಂದ ಸೋಲಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.