ಕ್ವಾರ್ಟರ್‌ ಫೈನಲ್‌ಗೆ ಸೈನಾ, ಸಮೀರ್‌ ಲಖನೌ: ಅ‍‍ಪೂರ್ವ ಆಟ ಆಡಿದ ಭಾರತದ ಸೈನಾ ನೆಹ್ವಾಲ್‌ ಮತ್ತು ಹಾಲಿ ಚಾಂಪಿಯನ್‌ ಸಮೀರ್‌ ವರ್ಮಾ ಅವರು ಸೈಯದ್‌ ಮೋದಿ ಇಂಟರ್‌ನ್ಯಾಷನಲ್‌ ವಿಶ್ವ ಸೂಪರ್‌ ಟೂರ್‌ 300 ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಕ್ವಾರ್ಟರ್‌ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ. ಪರುಪಳ್ಳಿ ಕಶ್ಯಪ್‌ ಕೂಡಾ ಎಂಟರ ಘಟ್ಟ ಪ್ರವೇಶಿಸಿದ್ದಾರೆ. ಗುರುವಾರ ನಡೆದ ಮಹಿಳೆಯರ ಸಿಂಗಲ್ಸ್‌ ವಿಭಾಗದ ಪ್ರೀ ಕ್ವಾರ್ಟರ್‌ ಫೈನಲ್‌ ಹಣಾಹಣಿಯಲ್ಲಿ ಸೈನಾ 21–14, 21–9 ನೇರ ಗೇಮ್‌ಗಳಿಂದ ಅಮೋಲಿಕಾ ಸಿಂಗ್‌ ಸಿಸೋಡಿಯಾ ಅವರನ್ನು ಸೋಲಿಸಿದರು. ಟೂರ್ನಿಯಲ್ಲಿ ನಾಲ್ಕನೇ ‍ಪ್ರಶಸ್ತಿಯ ನಿರೀಕ್ಷೆಯಲ್ಲಿರುವ ಸೈನಾ ಮೊದಲ ಗೇಮ್‌ನ ಆರಂಭದಲ್ಲಿ ಎದುರಾಳಿಯಿಂದ ತೀವ್ರ ಪೈಪೋಟಿ ಎದುರಿಸಿದರು. ವಿರಾಮದ ನಂತರ ಚುರುಕಿನ ಸರ್ವ್‌ ಮತ್ತು ಆಕರ್ಷಕ ಡ್ರಾಪ್‌ಗಳ ಮೂಲಕ ಪಾಯಿಂಟ್ಸ್‌ ಕಲೆಹಾಕಿ ಸಂಭ್ರಮಿಸಿದರು. ಎರಡನೇ ಶ್ರೇಯಾಂಕದ ಆಟಗಾರ್ತಿ ಸೈನಾ, ದ್ವಿತೀಯ ಗೇಮ್‌ನಲ್ಲೂ ಮಿಂಚಿದರು. ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಅಣಿಯಾದ ಅವರು ಎದುರಾಳಿಗೆ ಚೇತರಿಸಿಕೊಳ್ಳಲೂ ಅವಕಾಶ ನೀಡದೆ ನಿರಾಯಾಸವಾಗಿ ಗೆಲುವಿನ ತೋರಣ ಕಟ್ಟಿದರು. ಮುಂದಿನ ಸುತ್ತಿನಲ್ಲಿ ಸೈನಾ, ಭಾರತದ ರಿತುಪರ್ಣ ದಾಸ್‌ ವಿರುದ್ಧ ಸೆಣಸಲಿದ್ದಾರೆ. ಎಂಟನೇ ಶ್ರೇಯಾಂಕದ ಆಟಗಾರ್ತಿ ರಿತುಪರ್ಣ 21–11, 21–15ರಲ್ಲಿ ಶ್ರುತಿ ಮುಂಡಾದ ವಿರುದ್ಧ ಗೆದ್ದರು. ಇನ್ನೊಂದು ಪಂದ್ಯದಲ್ಲಿ ಸಾಯಿ ಉತ್ತೇಜಿತಾ ರಾವ್‌ ಚುಕ್ಕಾ 21–12, 21–15ರಲ್ಲಿ ರೇಷ್ಮಾ ಕಾರ್ತಿಕ್‌ ಅವರನ್ನು ಸೋಲಿಸಿದರು. ಪುರುಷರ ಸಿಂಗಲ್ಸ್‌ ವಿಭಾಗದ ಪ್ರೀ ಕ್ವಾರ್ಟರ್‌ ಫೈನಲ್‌ನಲ್ಲಿ ಮೂರನೇ ಶ್ರೇಯಾಂಕದ ಆಟಗಾರ ಸಮೀರ್‌ 22–20, 21–17ರಲ್ಲಿ ಚೀನಾದ ಜಾವೊ ಜುನ್‌ಪೆಂಗ್‌ ಅವರನ್ನು ಮಣಿಸಿದರು. ಮುಂದಿನ ಸುತ್ತಿನಲ್ಲಿ ಸಮೀರ್‌, ಚೀನಾದ ಜಾವೊ ಜೆಕಿ ವಿರುದ್ಧ ಪೈಪೋಟಿ ನಡೆಸಲಿದ್ದಾರೆ. ಇನ್ನೊಂದು ಪಂದ್ಯದಲ್ಲಿ ಕಶ್ಯಪ್‌ 9–21, 22–20, 21–8ರಲ್ಲಿ ಇಂಡೊನೇಷ್ಯಾದ ಫಿರ್ಮನ್‌ ಅಬ್ದುಲ್‌ ಖೊಲಿಕ್‌ ಅವರನ್ನು ಪರಾಭವಗೊಳಿಸಿದರು. ಎಂಟರ ಘಟ್ಟದ ಪೈಪೋಟಿಯಲ್ಲಿ ಕಶ್ಯಪ್‌, ಥಾಯ್ಲೆಂಡ್‌ನ ಸಿಟ್ಟಿಕೋಮ್‌ ಥಾಮಸಿನ್‌ ವಿರುದ್ಧ ಸೆಣಸಲಿದ್ದಾರೆ. ಬಿ.ಸಾಯಿ ಪ್ರಣೀತ್‌ 21–12, 21–10ರಲ್ಲಿ ಇಂಡೊನೇಷ್ಯಾದ ಶೇಷರ್‌ ಹಿರೇನ್‌ ರುಸ್ತಾವಿಟೊ ವಿರುದ್ಧ ವಿಜಯಿಯಾದರು. ಮುಂದಿನ ಸುತ್ತಿನಲ್ಲಿ ಪ್ರಣೀತ್‌, ಚೀನಾದ ಲು ಗುವಾಂಗ್‌ಜೌ ವಿರುದ್ಧ ಆಡಲಿದ್ದಾರೆ. ಇನ್ನೊಂದು ಪಂದ್ಯದಲ್ಲಿ ಲು 21–13, 21–10ರಲ್ಲಿ ಭಾರತದ ಶುಭಂಕರ್‌ ಡೇ ವಿರುದ್ಧ ಗೆದ್ದಿದ್ದರು. ಎಂಟರ ಘಟ್ಟಕ್ಕೆ ಅಶ್ವಿನಿ–ಸಾತ್ವಿಕ್‌: ಮಿಶ್ರ ಡಬಲ್ಸ್‌ನಲ್ಲಿ ಭಾರತದ ಭರವಸೆಯಾಗಿರುವ ಕರ್ನಾಟಕದ ಅಶ್ವಿನಿ ಪೊನ್ನಪ್ಪ ಮತ್ತು ಸಾತ್ವಿಕ್‌ ಸಾಯಿರಾಜ್‌ ರಣಕಿರೆಡ್ಡಿ ಅವರು ಕ್ವಾರ್ಟರ್‌ ಫೈನಲ್‌ ತಲುಪಿದರು. ಪ್ರೀ ಕ್ವಾರ್ಟರ್‌ ಫೈನಲ್‌ನಲ್ಲಿ ಅಶ್ವಿನಿ ಮತ್ತು ಸಾತ್ವಿಕ್‌ 12–21, 21–14, 21–15ರಲ್ಲಿ ಶಿವಂ ಶರ್ಮಾ ಮತ್ತು ಪೂರ್ವಿಶಾ ಎಸ್‌ ರಾಮ್‌ ವಿರುದ್ಧ ವಿಜಯಿಯಾದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.