ಪ್ರಶಸ್ತಿಯ ಸನಿಹ ಸೈನಾ, ಸಮೀರ್‌ ಲಖನೌ: ಹಾಲಿ ಚಾಂ‍ಪಿಯನ್‌ ಸಮೀರ್ ವರ್ಮಾ ಮತ್ತು ಮೂರು ಬಾರಿಯ ಚಾಂಪಿಯನ್‌ ಸೈನಾ ನೆಹ್ವಾಲ್‌ ಅವರು ಸೈಯದ್ ಮೋದಿ ಇಂಟರ್‌ನ್ಯಾಷನಲ್‌ ವಿಶ್ವ ಟೂರ್‌ ಸೂಪರ್‌ 300 ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ವಿಭಾಗದ ಫೈನಲ್‌ ತಲುಪಿದ್ದಾರೆ. ಮೂರನೇ ಶ್ರೇಯಾಂಕಿತ ಸಮೀರ್ ವರ್ಮಾ ಶನಿವಾರ ನಡೆದ ನಾಲ್ಕರ ಘಟ್ಟದ ಪಂದ್ಯದಲ್ಲಿ ಇಂಡೊನೇಷ್ಯಾದ ಚಿಕೊ ಔರ್‌ ದ್ವಿ ವಾರ್ಡೊಯೊ ಅವರನ್ನು 21–13, 17–21, 21–8ರಿಂದ ಮಣಿಸಿದರು. ಫೈನಲ್‌ನಲ್ಲಿ ಅವರಿಗೆ ಆರನೇ ಶ್ರೇಯಾಂಕಿತ, ಚೀನಾ ಆಟಗಾರ ಲೂ ಗ್ವಾಂಗ್ಜು ಎದುರಾಳಿ. ಮಹಿಳೆಯರ ವಿಭಾಗದಲ್ಲಿ ಎರಡನೇ ಶ್ರೇಯಾಂಕ ಹೊಂದಿರುವ ಸೈನಾ ಸೆಮಿಫೈನಲ್‌ನಲ್ಲಿ ಇಂಡೊನೇಷ್ಯಾದ ರುಸೆಲಿ ಹರ್ತವಾನ್ ಎದುರು 12–21, 21–7, 21–6ರಿಂದ ಗೆದ್ದರು. ಚೀನಾದ ಹ್ಯಾನ್‌ ಯೇ ಅವರನ್ನು ಸೈನಾ ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ಎದುರಿಸುವರು. ಅಶ್ವಿನಿ–ಸಿಕ್ಕಿ ಜೋಡಿ ಫೈನಲ್‌ಗೆ: ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಅಶ್ವಿನಿ ಪೊನ್ನಪ್ಪ ಮತ್ತು ಎನ್‌.ಸಿಕ್ಕಿ ರೆಡ್ಡಿ 21–18, 21–16ರಿಂದ ರಷ್ಯಾದ ಎಕಟೆರಿನಾ ಬೊಲೊಟೊವಾ–ಅಲೀನಾ ದವ್ಲೆಟೊವಾ ಜೋಡಿಯನ್ನು ಸೋಲಿಸಿ ಫೈನಲ್‌ಗೆ ಪ್ರವೇಶಿಸಿತು. ಆದರೆ ಮಿಶ್ರ ಡಬಲ್ಸ್‌ನಲ್ಲಿ ಅಶ್ವಿನಿ –ಸಾತ್ವಿಕ್‌ ಸಾಯಿರಾಜ್‌ ರಣಕಿರೆಡ್ಡಿ ಜೋಡಿ ಸೆಮಿಫೈನಲ್‌ನಲ್ಲಿ ಸೋತು ನಿರಾಸೆ ಅನುಭವಿಸಿತು. ಚೀನಾದ ಒವ್‌ ಕ್ಸಾನಿ–ಫೆಂಗ್‌ ಕ್ಸೆಂಗಿ ಜೋಡಿ ವಿರುದ್ಧ ಭಾರತದ ಜೋಡಿ 12–21, 21–18, 19–21ರಿಂದ ಸೋತಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.