ಹಿರಿಯ ಹಾಕಿ ಆಟಗಾರ ಸಂದೀಪ್‌ ನಿಧನ ಬೆಂಗಳೂರು: ಭಾರತದ ಹಿರಿಯ ಹಾಕಿ ಆಟಗಾರ ಸಂದೀಪ್‌ ಮೈಕಲ್‌ (33) ಶುಕ್ರವಾರ ನಿಧನರಾಗಿದ್ದಾರೆ. ನರ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಕರ್ನಾಟಕದ ಮೈಕಲ್‌, ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮೈಕಲ್‌ ಅವರ ನಾಯಕತ್ವದಲ್ಲಿ ಭಾರತ ತಂಡ 2003ರಲ್ಲಿ ನಡೆದಿದ್ದ ಜೂನಿಯರ್‌ ಏಷ್ಯಾಕಪ್‌ನಲ್ಲಿ ಪ್ರಶಸ್ತಿ ಜಯಿಸಿತ್ತು. ಪಾಕಿಸ್ತಾನ ಮತ್ತು ದಕ್ಷಿಣ ಕೊರಿಯಾ ವಿರುದ್ಧದ ಪಂದ್ಯಗಳಲ್ಲಿ ಸಂದೀಪ್‌ ಮಿಂಚಿನ ಆಟ ಆಡಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದರು. 2001ರಲ್ಲಿ ಮಲೇಷ್ಯಾದ ಇಫೊದಲ್ಲಿ ನಡೆದಿದ್ದ 18 ವರ್ಷದೊಳಗಿನವರ ಏಷ್ಯಾಕಪ್‌ನಲ್ಲೂ ಸಂದೀಪ್‌ ಪಾಲ್ಗೊಂಡಿದ್ದರು. ಸಂದೀಪ್‌ ಅವರ ತಂದೆ ಜಾನ್‌ ಮೈಕಲ್‌ ಕರ್ನಾಟಕ ವಾಲಿಬಾಲ್‌ ತಂಡದಲ್ಲಿ ಆಡಿದ್ದರು. ತಾಯಿ ಅಲಮೇಲು ಕೂಡಾ ಕ್ರೀಡಾಪಟುವಾಗಿದ್ದಾರೆ. ಸಂದೀಪ್‌ ಅವರ ಸಹೋದರ ವಿನೀತ್‌ ಕೂಡಾ ಹಾಕಿಪಟುವಾಗಿದ್ದಾರೆ. ಅವರು 2002ರ ರಾಷ್ಟ್ರೀಯ ಸಬ್‌ ಜೂನಿಯರ್‌ ಹಾಕಿ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.