ಕಬಡ್ಡಿ: ಬುಲ್ಸ್‌ಗೆ ‘ತವರಿನಲ್ಲಿ’ ನಿರಾಸೆ ಪುಣೆ: ಪವನ್ ಶೆರಾವತ್ ಮತ್ತು ನಾಯಕ ರೋಹಿತ್ ಕುಮಾರ್ ಅವರು ಉತ್ತಮ ರೈಡಿಂಗ್ ಮೂಲಕ ಮಿಂಚಿದರು. ಆದರೆ ಬೆಂಗಳೂರು ಬುಲ್ಸ್ ತಂಡ ‘ತವರಿನ’ ಮೊದಲ ಪಂದ್ಯದಲ್ಲೇ ನಿರಾಸೆಗೆ ಒಳಗಾಯಿತು. ಇಲ್ಲಿನ ಶಿವ ಛತ್ರಪತಿ ಕ್ರೀಡಾಂಗಣದಲ್ಲಿ ಶುಕ್ರವಾರ ರಾತ್ರಿ ನಡೆದ ಪ್ರೊ ಕಬಡ್ಡಿ ಲೀಗ್‌ನ ಪಂದ್ಯದಲ್ಲಿ ಬೆಂಗಳೂರು ಬುಲ್ಸ್‌ ತಂಡ ಬೆಂಗಾಲ್ ವಾರಿಯರ್ಸ್‌ಗೆ 32–28ರಿಂದ ಮಣಿಯಿತು. ಮೊದಲಾರ್ಧದ ಮುಕ್ತಾಯದ ವೇಳೆ ವಾರಿಯರ್ಸ್‌ 18–14ರಿಂದ ಮುನ್ನಡೆ ಸಾಧಿಸಿತು. ದ್ವಿತೀಯಾರ್ಧದಲ್ಲೂ ಪಂದ್ಯ ರೋಚಕ ಕ್ಷಣಗಳಿಗೆ ಸಾಕ್ಷಿಯಾಯಿತು. ಕೊನೆಗೆ ಬುಲ್ಸ್ ಸೋಲೊಪ್ಪಿಕೊಂಡಿತು. ಪವನ್ ಶೆರಾವತ್‌ 11 ಪಾಯಿಂಟ್ ಗಳಿಸಿದರೆ, ರೋಹಿತ್ ಕುಮಾರ್‌ ಎಂಟು ಪಾಯಿಂಟ್‌ಗಳೊಂದಿಗೆ ಮಿಂಚಿದರು. ಕಾಶಿಲಿಂಗ ಅಡಕೆ ಐದು ಪಾಯಿಂಟ್‌ಗಳ ಕಾಣಿಕೆ ನೀಡಿದರು. ವಾರಿಯರ್ಸ್‌ ಪರ ಮಣಿಂದರ್ ಸಿಂಗ್‌ 14 ಪಾಯಿಂಟ್ ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಮಹೇಶ್ ಗೌಡ್‌ ಆರು, ರವೀಂದ್ರ ಮತ್ತು ರಣ್ ಸಿಂಗ್ ತಲಾ ಮೂರು ಪಾಯಿಂಟ್ ಬಗಲಿಗೆ ಹಾಕಿಕೊಂಡರು. ರಾತ್ರಿ ನಡೆದ ಮತ್ತೊಂದು ಪಂದ್ಯದಲ್ಲಿ ಜೈಪುರ ಪಿಂಕ್‌ ಪ್ಯಾಂಥರ್ಸ್‌ ಮತ್ತು ಪುಣೇರಿ ಪಲ್ಟನ್ ತಂಡಗಳು 30–30ರಿಂದ ಡ್ರಾ ಸಾಧಿಸಿದವು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.