ಪ್ರೊ ಕಬಡ್ಡಿ: ಟೈಟನ್ಸ್‌ಗೆ ಸೋಲುಣಿಸಿದ ಬುಲ್ಸ್‌ ಪುಣೆ: ಇಲ್ಲಿನ ಶಿವ ಛತ್ರಪತಿ ಕ್ರೀಡಾಂಗಣದಲ್ಲಿ ನಾಯಕ ರೋಹಿತ್ ಕುಮಾರ್‌ ಮತ್ತು ಯುವ ಆಟಗಾರರಾದ ಪವನ್ ಶೆರಾವತ್‌ ಹಾಗೂ ಅಮಿತ್ ಶೆರಾನ್‌ ಆಟಕ್ಕೆ ಪ್ರೇಕ್ಷಕರು ಮುದಗೊಂಡರು. ಪ್ರೊ ಕಬಡ್ಡಿ ಟೂರ್ನಿಯ ತವರಿನ ಲೆಗ್‌ನ ಪಂದ್ಯದಲ್ಲಿ ಈ ಮೂವರ ಅಮೋಘ ಆಟದಿಂದ ಬೆಂಗಳೂರು ಬುಲ್ಸ್‌ ಗೆಲುವು ಸಾಧಿಸಿತು. 19 ರೇಡ್‌ಗಳಲ್ಲಿ ರೋಹಿತ್‌ ಎಂಟು ಪಾಯಿಂಟ್‌ಗಳನ್ನು ಕಲೆ ಹಾಕಿದರೆ, ಪವನ್ ಶೆರಾವತ್‌ ಆರು ರೇಡಿಂಗ್ ಪಾಯಿಂಟ್ ಗಳಿಸಿದರು. ಅಮಿತ್‌ ಶೆರಾನ್‌ ಐದು ಟ್ಯಾಕ್ಲಿಂಗ್ ಪಾಯಿಂಟ್ ಗಳಿಸಿ ಮಿಂಚಿದರು. ಟೈಟನ್ಸ್‌ ಪರ ರಾಹುಲ್ ಚೌಧರಿ ಮತ್ತು ವಿಶಾಲ್ ಭಾರದ್ವಾಜ್ ತಲಾ ಆರು ಪಾಯಿಂಟ್ ಗಳಿಸಿದರು. ಪುಣೇರಿ ಪಲ್ಟನ್‌ಗೆ ಜಯ: ಮತ್ತೊಂದು ಪಂದ್ಯದಲ್ಲಿ ಪುಣೇರಿ ಪಲ್ಟನ್ ತಂಡ ಹರಿಯಾಣ ಸ್ಟೀಲರ್ಸ್‌ ಎದುರು 35–33ರಿಂದ ಗೆದ್ದಿತು. ಪುಣೇರಿ ತಂಡದ ಸಂದೀಪ್‌ ನರ್ವಾಲ್ ಆಲ್‌ರೌಂಡ್ (ರೇಡಿಂಗ್ 5, ಟ್ಯಾಕಲ್‌ 1 ಮತ್ತು ಬೋನಸ್ 1) ಆಟವಾಡಿದರು. ಹರಿಯಾಣದ ಮೋನು ಗೋಯತ್ ಒಟ್ಟು 11 ಪಾಯಿಂಟ್‌ಗಳನ್ನು ಸಂಗ್ರಹಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.