ಪ್ರೊ ಕಬಡ್ಡಿ: ಪುಣೇರಿ ಪಲ್ಟನ್ ಜಯಭೇರಿ ಪುಣೆ: ಬುಧವಾರ ರಾತ್ರಿ ಇಲ್ಲಿಯ ಶ್ರೀ ಶಿವ ಛತ್ರಪತಿ ಕ್ರೀಡಾಂಗಣದಲ್ಲಿ ನಡೆದ ರೋಚಕ ಹಣಾಹಣಿಯಲ್ಲಿ ಪುಣೇರಿ ಪಲ್ಟನ್‌ ತಂಡವು ಹರಿಯಾಣ ಸ್ಟೀಲರ್ಸ್‌ ಎದುರು ಗೆದ್ದಿತು. ತುರುಸಿನ ಹೋರಾಟ ನಡೆದ ಪಂದ್ಯದಲ್ಲಿ ಪುಣೇರಿ ತಂಡವು 35–33 ರಿಂದ ಹರಿಯಾಣ ವಿರುದ್ಧ ಗೆದ್ದಿತು. ಪಂದ್ಯದ ಆರಂಭದಿಂದ ಕೊನೆಯವರೆಗೂ ಎರಡೂ ತಂಡಗಳ ಆಟಗಾರರು ಜಿದ್ದಾಜಿದ್ದಿಯ ಹೋರಾಟ ನಡೆಸಿದರು. ಪುಣೇರಿ ತಂಡದ ಸಂದೀಪ್‌ ನರ್ವಾಲ್ ಆಲ್‌ರೌಂಡ್ (ರೇಡಿಂಗ್ 5, ಟ್ಯಾಕಲ್‌ 1 ಮತ್ತು ಬೋನಸ್ 1) ಆಟವಾಡಿದರು. ಜಿ.ಬಿ. ಮೋರೆ ಮತ್ತು ಮೋನು ಅವರು ತಲಾ ಆರು ಅಂಕಗಳನ್ನು ರೇಡಿಂಗ್‌ನಲ್ಲಿ ಸಂಗ್ರಹಿಸಿ ತಂಡದ ಬಲ ಹೆಚ್ಚಿಸಿದರು. ರಕ್ಷಣೆ ವಿಭಾಗದಲ್ಲಿ ಮಿಂಚಿದ ಗಿರೀಶ ಎರ್ನಾಕ್ ಮೂರು ಪಾಯಿಂಟ್‌ಗಳನ್ನು ಬುಟ್ಟಿಗೆ ಹಾಕಿಕೊಂಡರು.‌ ಪುಣೆ ತಂಡಕ್ಕೆ ಸೆಡ್ಡು ಹೊಡೆದು ನಿಂತ ಹರಿಯಾಣದ ಮೋನು ಗೋಯತ್ ಒಟ್ಟು 11 ಅಂಕಗಳನ್ನು ಗಳಿಸಿದರು. ರೇಡಿಂಗ್‌ನಲ್ಲಿ ಎಂಟು, ಟ್ಯಾಕಲ್‌ನಲ್ಲಿ ಒಂದು ಮತ್ತು ಬೋನಸ್‌ನಲ್ಲಿ ಎರಡು ಪಾಯಿಂಟ್‌ಗಳು ಅದರಲ್ಲಿದ್ದವು. ಅವರೊಂದಿಗೆ ಉತ್ತಮವಾಗಿ ಅಡಿದ ವಿಕಾಶ್ ಖಂಡೋಲಾ ಎಂಟು, ನವೀನ್ ಮೂರು ಅಂಕಗಳನ್ನು ರೇಡಿಂಗ್‌ನಲ್ಲಿ ತಂದರು. ಸುನೀಲ್ ರಕ್ಷಣೆ ವಿಭಾಗದಲ್ಲಿ ಮೂರು ಮತ್ತು ಕುಲದೀಪ್ ಸಿಂಗ್ ಎರಡು ಅಂಕಗಳನ್ನು ಗಳಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.