ಬ್ಯಾಡ್ಮಿಂಟನ್‌: ಸೆಮಿಫೈನಲ್‌ಗೆ ಜನನಿ ಬೆಂಗಳೂರು: ಅಪೂರ್ವ ಆಟ ಆಡಿದ ಕರ್ನಾಟಕದ ಜನನಿ ಅನಂತಕುಮಾರ್‌ ಅವರು ರಾಷ್ಟ್ರೀಯ ಸಬ್‌ ಜೂನಿಯರ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಕರ್ನಾಟಕ ಬ್ಯಾಡ್ಮಿಂಟನ್‌ ಸಂಸ್ಥೆ (ಕೆಬಿಎ) ಅಂಗಳದಲ್ಲಿ ಶುಕ್ರವಾರ ನಡೆದ 17 ವರ್ಷದೊಳಗಿನ ಬಾಲಕಿಯರ ಸಿಂಗಲ್ಸ್‌ ವಿಭಾಗದ ಕ್ವಾರ್ಟರ್‌ ಫೈನಲ್‌ನಲ್ಲಿ ಜನನಿ 21–14, 21–19ರಲ್ಲಿ ಪಶ್ಚಿಮ ಬಂಗಾಳದ ಉತ್ಸವ ಪಲಿಟ್‌ ಅವರನ್ನು ಪರಾಭವಗೊಳಿಸಿದರು. ಶ್ರೇಯಾಂಕ ರಹಿತ ಆಟಗಾರ್ತಿ ಜನನಿ, ಎರಡನೇ ಶ್ರೇಯಾಂಕದ ಉತ್ಸವ ವಿರುದ್ಧ ಎರಡು ಗೇಮ್‌ಗಳಲ್ಲೂ ದಿಟ್ಟ ಆಟ ಆಡಿದರು. ಇದಕ್ಕೂ ಮೊದಲು ನಡೆದಿದ್ದ ಪ್ರೀ ಕ್ವಾರ್ಟರ್‌ ಫೈನಲ್‌ನಲ್ಲಿ ಜನನಿ 21–17, 21–18 ನೇರ ಗೇಮ್‌ಗಳಿಂದ ತೆಲಂಗಾಣದ 11ನೇ ಶ್ರೇಯಾಂಕದ ಆಟಗಾರ್ತಿ ಮೇಘನಾ ರೆಡ್ಡಿ ಅವರನ್ನು ಸೋಲಿಸಿದ್ದರು. 15 ವರ್ಷದೊಳಗಿನ ಬಾಲಕಿಯರ ಸಿಂಗಲ್ಸ್‌ ವಿಭಾಗದ ಕ್ವಾರ್ಟರ್‌ ಫೈನಲ್‌ನಲ್ಲಿ ವಿಜೇತಾ ಹರೀಶ್‌ 21–10, 15–21, 21–14ರಲ್ಲಿ ಹರಿಯಾಣದ ಅನುಪಮಾ ಉಪಾಧ್ಯಾಯ ಎದುರು ಗೆದ್ದರು. 15 ವರ್ಷದೊಳಗಿನ ಬಾಲಕರ ಸಿಂಗಲ್ಸ್‌ ವಿಭಾಗದ ಕ್ವಾರ್ಟರ್‌ ಫೈನಲ್‌ನಲ್ಲಿ ಆಯುಷ್‌ ಶೆಟ್ಟಿ 17–21, 15–21ರಲ್ಲಿ ಪಂಜಾಬ್‌ನ ಅಭಿನವ್‌ ಠಾಕೂರ್‌ ಎದುರು ಸೋತರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.