ಕಬಡ್ಡಿ: ಕರ್ನಾಟಕ ತಂಡ ಪಾರಮ್ಯ ಮಂಗಳೂರು: ಪರಮಾನಂದ ತಾಳೇ ವಾಡ್‌, ಸುರೇಶ್ ಚೆನ್ನದಾತರ್‌ ಹಾಗೂ ಬಸವರಾಜ್‌ ಅವರ ಅಮೋಘ ಆಟದ ಫಲವಾಗಿ ಕರ್ನಾಟಕ ತಂಡವು ಇಲ್ಲಿ ನಡೆಯುತ್ತಿರುವ ರಾಷ್ಟ್ರಮಟ್ಟದ ಅಂಗ ವಿಕಲರ ಕಬಡ್ಡಿ ಚಾಂಪಿಯನ್‌ಷಿಪ್‌ ಪಂದ್ಯದಲ್ಲಿ ಗೆದ್ದಿತು. ಇಲ್ಲಿನ ಮಂಗಳಾ ಕ್ರೀಡಾಂಗಣದಲ್ಲಿ ಮಾತೃ ಪ್ರತಿಷ್ಠಾನ, ರಾಜ್ಯ ಅಂಗವಿಕಲರ ಕಬಡ್ಡಿ ಸಂಸ್ಥೆ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಇಲ್ಲಿ ನಡೆಯುತ್ತಿರುವ ಅಂಗವಿಕಲರ ರಾಷ್ಟ್ರಮಟ್ಟದ ಪ್ರಥಮ ಕಬಡ್ಡಿ ಟೂರ್ನಿಯಲ್ಲಿ ಕರ್ನಾಟಕ ತಂಡವು 21– 13 ರಿಂದ ರಾಜಸ್ಥಾನ ವಿರುದ್ಧ ಗೆದ್ದಿತು. ಪರಮಾನಂದ ತಾಳೇವಾಡ್‌ 15 ಹಾಗೂ ಸುರೇಶ್ ಚೆನ್ನದಾತರ್‌ ಮೂರು, ಬಸವರಾಜ್‌ ನಾಲ್ಕು ಪಾಯಿಂಟ್ಸ್‌ ದಾಖಲಿಸಿದರು. ಪರ ಮಾನಂದ ತಾಳೇವಾಡ್‌ ಅವರು ಆಲ್‌ರೌಂಡರ್‌ ಆಟ ಆಡಿ 7 ಬೋನಸ್‌, 6 ರೈಡಿಂಗ್‌, 2 ಟ್ಯಾಕಲ್‌ ಪಾಯಿಂಟ್‌ ಗಳಿಸಿ ಕರ್ನಾಟಕ ತಂಡದ ಗೆಲುವಿನಲ್ಲಿ ಪಾರಮ್ಯ ಮೆರೆದರು. ಕರ್ನಾಟಕ ತಂಡವು ಲೀಗ್‌ ಹಂತದ ಮತ್ತೊಂದು ಟೂರ್ನಿಯಲ್ಲಿ 31–21 ರಿಂದ ಪುದುಚೇರಿ ವಿರುದ್ದ ಗೆಲುವು ದಾಖಲಿಸಿತು. ಮಧ್ಯಾಹ್ನ ನಡೆದ ಪಂದ್ಯದಲ್ಲಿ ಗೋವಾ ತಂಡವು 27–11 ರಿಂದ ಜಾರ್ಖಂಡ್‌ ತಂಡದ ವಿರುದ್ಧ ಗೆದ್ದಿತು. ಗೋವಾ ತಂಡದ ಶಿವಶಂಕರ ಹಾಗೂ ನೂರ್‌ ಅಹ್ಮದ್‌ ಉತ್ತಮ ಆಟ ಪ್ರದರ್ಶಿಸಿದರು. ತಮಿಳುನಾಡು ತಂಡವು 31–24 ರಿಂದ ಪಶ್ಚಿಮ ಬಂಗಾಳ ತಂಡದ ವಿರುದ್ಧ ಗೆದ್ದಿತು. ಭಾನುವಾರ ನಾಕೌಟ್‌ ಹಾಗೂ ಫೈನಲ್‌ ಹಂತದ ಪಂದ್ಯಗಳು ನಡೆ ಯಲಿವೆ.‌ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.