ಪ್ರೊ ಕಬಡ್ಡಿಯ ‘ಪವನ’ಶಕ್ತಿ ಪ್ರೊ ಕಬಡ್ಡಿ ಲೀಗ್ ಆವೃತ್ತಿಯಿಂದ ಆವೃತ್ತಿಗೆ ಹೆಚ್ಚು ಜನಪ್ರಿಯವಾಗುತ್ತಿದೆ. ಚೊಚ್ಚಲ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿರುವ ಬೆಂಗಳೂರು ಬುಲ್ಸ್‌ ಈ ಬಾರಿ ಚೆನ್ನಾಗಿ ಆಡುತ್ತಿದೆ. ‘ಬಿ’ ಗುಂಪಿನಲ್ಲಿ ಅಗ್ರ ಸ್ಥಾನದಲ್ಲಿರುವ ಬುಲ್ಸ್‌ ಆಡಿರುವ 18 ಪಂದ್ಯಗಳಲ್ಲಿ 11ರಲ್ಲಿ ಜಯಿಸಿ, 64 ಪಾಯಿಂಟ್ಸ್‌ ಸಂಪಾದಿಸಿದೆ. ತಂಡದ ಪ್ರಮುಖ ರೈಡರ್ ಆಗಿರುವ ಪವನ್‌ ಶೆರಾವತ್ ಅವರು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ದೆಹಲಿಯ ಈ ಆಟಗಾರರನನ್ನು ಬುಲ್ಸ್ ತಂಡ ₹52.8 ಲಕ್ಷಕ್ಕೆ ಖರೀದಿಸಿದೆ. ಐದನೇ ಸೀಸನ್‌ ಹೊರತುಪಡಿಸಿ ಉಳಿದ ಎಲ್ಲ ಸೀಸನ್‌ಗಳಲ್ಲಿ ಅವರು ಬೆಂಗಳೂರು ಬುಲ್ಸ್‌ ಪರ ಆಡಿದ್ದಾರೆ. ಈ ಸೀಸನ್‌ನ ಆರಂಭಿಕ ಪಂದ್ಯದಲ್ಲಿ 20 ಪಾಯಿಂಟ್ಸ್ ಗಳಿಸಿರುವುದು ಅವರ ಶ್ರೇಷ್ಠ ಪ್ರದರ್ಶನ. ಅವರು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ್ದಾರೆ. * ಈ ಹಿಂದಿನ ಸೀಸನ್‌ಗೆ ಹೋಲಿಸಿದರೆ ಈ ಬಾರಿ ಬೆಂಗಳೂರು ಬುಲ್ಸ್ ಪ್ರದರ್ಶನ ಹೇಗಿದೆ. ಈಗಾಗಲೇ 18 ಪಂದ್ಯಗಳಲ್ಲಿ 11ರಲ್ಲಿ ಜಯ ಸಾಧಿಸಿದ್ದೀರಿ. ತಂಡ ಪ್ಲೇ ಆಫ್‌ಗೆ ಅರ್ಹತೆ ಪಡೆದುಕೊಳ್ಳಲು ಯಾವ ರೀತಿ ಯೋಜನೆ ರೂಪಿಸಿದ್ದೀರಿ? - ಹಿಂದಿನ ಸೀಸನ್‌ನಲ್ಲಿ ನಾನು ತಂಡದಲ್ಲಿ ಇರಲಿಲ್ಲ. ಹೀಗಾಗಿ ನಾನು ಆ ಬಗ್ಗೆ ಹೇಳುವುದಿಲ್ಲ. ನಾನು ನೋಡಿದಂತೆ ರಕ್ಷಣಾತ್ಮಕ ವಿಭಾಗದ ಅಷ್ಟಾಗಿ ಪರಿಣಾಮಕಾರಿಯಾಗಿರಲಿಲ್ಲ. ರೋಹಿತ್ ಕುಮಾರ್‌ ಅವರಿಗೆ ಉಳಿದ ರೈಡರ್‌ಗಳಿಂದ ಹೆಚ್ಚು ಪ್ರೋತ್ಸಾಹ ಸಿಗಲಿಲ್ಲ. ಈ ಬಾರಿ ತಂಡದ ದೌರ್ಬಲ್ಯವನ್ನು ಮೀರಲು ತರಬೇತುದಾರರು ವಿಭಿನ್ನ ಯೋಜನೆ ರೂಪಿಸಿದ್ದಾರೆ. ಮುಂದಿನ ಪಂದ್ಯಗಳಲ್ಲಿ ಎಲ್ಲ ಯೋಜನೆಗಳನ್ನು ಜಾರಿಗೊಳಿಸಿ ಪ್ಲೇ ಆಫ್‌ಗೆ ಅರ್ಹತೆ ಗಿಟ್ಟಿಸುತ್ತೇವೆ. * ಸುದೀರ್ಘ ಮೂರು ತಿಂಗಳ ಕಾಲ ನಡೆಯುವ ಈ ಟೂರ್ನಿಯಲ್ಲಿ ಸಾಮರ್ಥ್ಯ ಕಾಪಾಡಿಕೊಳ್ಳಲು ಹೇಗೆ ಸಾಧ್ಯವಾಗಿದೆ. ನಿಮ್ಮ ಫಿಟ್‌ನೆಸ್ ಹಾಗೂ ಅಭ್ಯಾಸದ ಕುರಿತು ಹೇಳಿ - ಪ್ರೊ ಕಬಡ್ಡಿ ಟೂರ್ನಿ ದೃಷ್ಟಿಯಿಂದ ಮಾತ್ರ ನಾನು ಫಿಟ್‌ನೆಸ್‌ಗೆ ಗಮನ ಕೊಡುವುದಿಲ್ಲ. ದಿನಕ್ಕೆ ಎರಡು ಬಾರಿ ವರ್ಕೌಟ್ ಮಾಡುತ್ತೇನೆ. ಬೆಳಗಿನ ಅವಧಿಯಲ್ಲಿ ಸಾಮಾನ್ಯ ವರ್ಕೌಟ್‌ ಮತ್ತು ತರಬೇತಿ ಇರುತ್ತದೆ. ಸಂಜೆ ಕೌಶಲಯುಕ್ತ ತರಬೇತಿಗೆ ಒತ್ತು ನೀಡುತ್ತೇನೆ. ಪ್ರತಿದಿನ ಅಭ್ಯಾಸ ಮಾಡುವುದರಿಂದ ಮತ್ತು ಆರೋಗ್ಯಕರ ಜೀವನಶೈಲಿಯಿಂದ ಸಾಮರ್ಥ್ಯ ವೃದ್ಧಿಸಿಕೊಳ್ಳಲು ಸಾಧ್ಯವಾಗಿದೆ. ಗುಣಮಟ್ಟದ ಆಹಾರ ಸೇವನೆ ಮಾಡುತ್ತೇನೆ. ನಿಗದಿತವಾಗಿ ನಿದ್ದೆ ಮಾಡುತ್ತೇನೆ. ಪಿಕೆಎಲ್ ಸಂದರ್ಭದಲ್ಲಿ ನ್ಯೂಟ್ರಿಷನ್, ಡಯಟ್‌ ತಜ್ಞರು ಸಲಹೆ ನೀಡುತ್ತಾರೆ. ಜಂಕ್‌ಫುಡ್‌, ಕರಿದ ತಿಂಡಿ ತಿನ್ನುವುದಿಲ್ಲ. ಪ್ರತಿದಿನ ಕಿತ್ತಳೆ ರಸ ಕುಡಿಯುತ್ತೇನೆ. * ಈ ಕ್ರೀಡೆಯ ನಂಟು ಬೆಳೆದಿದ್ದು ಯಾವಾಗ?, ಪ್ರೊ ಕಬಡ್ಡಿ ಲೀಗ್‌ನಲ್ಲಿ ನಿಮ್ಮ ಅನುಭವ ಹೇಗಿದೆ. –ಎಂಟು ವರ್ಷದವನಿದ್ದಾಗ ಕಬಡ್ಡಿ ಆಡಲು ಅರಂಭಿಸಿದೆ. ಆಗ ಹಿರಿಯ ಆಟಗಾರರಾದ ರೋಹಿತ್ ಕುಮಾರ್‌, ಕಾಶಿಲಿಂಗ ಅವರ ಆಟವನ್ನು ನೋಡುತ್ತಿದ್ದೆ. ಈಗ ಅವರೊಂದಿಗೆ ಆಡುವ ಸೌಭಾಗ್ಯ ದೊರೆತಿದೆ. * ಕಬಡ್ಡಿಯಲ್ಲಿ ನಿಮಗೆ ಸ್ಫೂರ್ತಿ ಯಾರು? – ಮಂಜೀತ್ ಚಿಲ್ಲಾರ್ ನನ್ನ ಸ್ಫೂರ್ತಿ * ಪ್ರೊ ಕಬಡ್ಡಿಯ ಆರನೇ ಆವೃತಿಯಲ್ಲಿ ನಿಮ್ಮ ಪ್ರದರ್ಶನ ಹೇಗೆ ಉತ್ತಮಪಡಿಸಿಕೊಂಡಿದ್ದೀರಿ ? – ತರಬೇತಿ ಶಿಬಿರದಲ್ಲಿ ಕಲಿತ ಎಲ್ಲ ಕೌಶಲಗಳು, ಸಲಹೆಗಳನ್ನು ಪಂದ್ಯದಲ್ಲಿ ಬಳಸಲು ಹೆಚ್ಚು ಶ್ರಮ ವಹಿಸುತ್ತೇನೆ. ತಂಡಕ್ಕೆ ಹೆಚ್ಚು ಕೊಡುಗೆ ನೀಡಬೇಕು ಎಂಬುದು ನನ್ನ ಆಸೆ. ಉತ್ತಮವಾಗಿ ಆಡಬೇಕು ಮತ್ತು ತಂಡ ಪ್ಲೇ ಆಫ್‌ಗೆ ಅರ್ಹತೆ ಪಡೆಯಬೇಕು ಎಂಬುದು ನನ್ನ ಗುರಿ. * ಹಿರಿಯ ಆಟಗಾರರ ಜತೆ ಒಡನಾಟ ಹೇಗಿದೆ. ಅವರ ಜತೆ ಆಡಿದಾಗ ಆದ ಅನುಭವದ ಕುರಿತು ಹೇಳಿ – ಹಿರಿಯ ಮತ್ತು ಅನುಭವಿ ಆಟಗಾರರೊಂದಿಗೆ ಆಡುವುದು ಹೆಮ್ಮೆಯ ವಿಷಯ. ರೋಹಿತ್ ಮತ್ತು ಕಾಶಿ ಅವರು ನೀಡಿದ ಸಲಹೆಯಿಂದ ಆಟವನ್ನು ಸುಧಾರಿಸಿಕೊಂಡಿದ್ದೇನೆ. ತಪ್ಪುಗಳಾದಾಗ ಅವರ ಸಲಹೆ ಪಡೆದು ತಿದ್ದಿಕೊಂಡಿದ್ದೇನೆ. * ಹೊಸ ಆಟಗಾರರಿಗೆ ಯಾವ ಸಲಹೆ ಕೊಡುತ್ತೀರಿ? - ಅವರಿಗೆ ಸದಾ ಪ್ರೋತ್ಸಾಹ ನೀಡಲು ಪ್ರಯತ್ನಿಸುತ್ತೇನೆ. ಅಲ್ಲದೆ, ಯಾವಾಗಲೂ ಆತ್ಮವಿಶ್ವಾಸದಿಂದ ಇರುವಂತೆ ಹೇಳುತ್ತೇನೆ. * ಓದು ಮತ್ತು ಕ್ರೀಡೆಯನ್ನು ಹೇಗೆ ನಿಬಾಯಿಸುತ್ತೀರಿ. ಕಬಡ್ಡಿಯಲ್ಲಿಯೇ ಮುಂದುವರಿಯುತ್ತೀರೋ ಆಥವಾ ಉನ್ನತ ಶಿಕ್ಷಣ ಪಡೆಯುವ ಗುರಿ ಇದೆಯೇ? – ವಿದ್ಯಾಭ್ಯಾಸದ ಜತೆಗೆ ವೃತ್ತಿಪರವಾಗಿ ಕಬಡ್ಡಿಯಲ್ಲಿ ತೊಡಗಿಸಿಕೊಂಡಿದ್ದು, ರೈಲ್ವೇಸ್‌ನಲ್ಲಿ ಕೆಲಸ ಮಾಡುತ್ತಿದ್ದೇನೆ. ಮೂರನ್ನೂ ನಿಬಾಯಿಸುವುದು ಒಮ್ಮೊಮ್ಮೆ ಕಷ್ಟ ಎನಿಸುತ್ತದೆ. ಆದರೆ, ನನಗೆ ಬೇರೆ ಆಯ್ಕೆಗಳಿಲ್ಲ. ಬೆಳಿಗ್ಗೆ ಮತ್ತು ಸಂಜೆಯ ಸಮಯವನ್ನು ಕಬಡ್ಡಿಗಾಗಿ ಮೀಸಲಿಡುತ್ತೇನೆ. ದೆಹಲಿ ಯೂನಿವರ್ಸಿಟಿಯಲ್ಲಿ ಕರೆಸ್ಪಾಂಡೆನ್ಸ್‌ನಲ್ಲಿ ಓದುತ್ತಿದ್ದೇನೆ. ಪದವಿ ಪೂರ್ಣಗೊಳಿಸುವ ಗುರಿ ಇದೆ. * ನಿಮ್ಮ ಮನೆಯಿಂದ ಯಾವ ರೀತಿ ಪ್ರೋತ್ಸಾಹ ಸಿಗುತ್ತಿದೆ? – ನಾವು ಇಬ್ಬರು ಮಕ್ಕಳು. ತಂದೆಯೂ ನನ್ನ ಕ್ರೀಡಾಭ್ಯಾಸದಲ್ಲಿ ಭಾಗಿಯಾಗುತ್ತಾರೆ. ವಿದ್ಯಾಭ್ಯಾಸದ ಕಡೆ ಮಾತ್ರ ಗಮನ ಹರಿಸಬೇಕು ಎಂಬ ಒತ್ತಡ ಇಲ್ಲ. ಓದಿನ ಜತೆಗೆ ಕ್ರೀಡೆಯಲ್ಲಿಯೂ ಭಾಗವಹಿಸಲು ಪ್ರೊತ್ಸಾಹ ಸಿಗುತ್ತಿದೆ. ಆರನೇ ಸೀಸನ್‌ನಲ್ಲಿ ಪವನ್‌ಕುಮಾರ ಸಾಧನೆ ಪಂದ್ಯ: 18 ಪಾಯಿಂಟ್ಸ್‌: 200 ಉತ್ತಮ ಪ್ರದರ್ಶನ: 20 ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.