ನವೀನ್‌ ಜಾನ್‌, ಜೆನ್ಸನ್‌ಗೆ ಅಗ್ರಸ್ಥಾನ ಮೈಸೂರು: ಭಾರತದ ನವೀನ್‌ ಜಾನ್‌ ಮತ್ತು ಡೆನ್ಮಾರ್ಕ್‌ನ ಕಟ್ಜಾ ಲಿಲ್‌ ಜೆನ್ಸನ್‌ ಅವರು ‘ರೈಡ್‌ ಎ ಸೈಕಲ್‌ ಪ್ರತಿಷ್ಠಾನ’ ವತಿಯಿಂದ ಆಯೋಜಿಸಿದ್ದ ಟೂರ್ ಆಫ್‌ ನೀಲಗಿರೀಸ್‌‍ನ 11ನೇ ಆವೃತ್ತಿಯ ಸೈಕ್ಲಿಂಗ್‌ ರ‍್ಯಾಲಿಯಲ್ಲಿ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ವಿಭಾಗಗಳಲ್ಲಿ ಅಗ್ರಸ್ಥಾನ ಪಡೆದುಕೊಂಡರು. ಡಿ.9 ರಂದು ಮೈಸೂರಿನಿಂದ ಆರಂಭಗೊಂಡಿದ್ದ ಸ್ಪರ್ಧೆ ಭಾನುವಾರ ಮೈಸೂರಿನಲ್ಲೇ ಕೊನೆಗೊಂಡಿತು. ಸ್ಪರ್ಧಿಗಳು ಎಂಟು ದಿನಗಳಲ್ಲಿ ಒಟ್ಟು 950 ಕಿ.ಮೀ. ಕ್ರಮಿಸಿದರು. ಮೈಸೂರಿನಿಂದ ಹೊರಟಿದ್ದ ಸ್ಪರ್ಧಿಗಳು ಹಾಸನ, ಕುಶಾಲನಗರ, ಸುಲ್ತಾನ್‌ ಬತ್ತೇರಿ, ಊಟಿ, ಕಲ್ಪೆಟ್ಟಿ ಮಾರ್ಗವಾಗಿ ಸಾಗಿ ಮತ್ತೆ ಸಾಂಸ್ಕೃತಿಕ ನಗರಿಗೆ ಮರಳಿದರು. ಈ ಬಾರಿ 18 ಮಹಿಳೆಯರೂ ಸೇರಿದಂತೆ ಒಟ್ಟು 110 ಸೈಕ್ಲಿಸ್ಟ್‌ಗಳು ಪಾಲ್ಗೊಂಡಿದ್ದರು. ವಿದೇಶದ 29 ಸೈಕ್ಲಿಸ್ಟ್‌ಗಳೂ ಭಾಗವಹಿಸಿದ್ದರು. ಗೆದ್ದವರ ವಿವರ: ಪುರುಷರ ವಿಭಾಗ: ನವೀನ್‌ ಜಾನ್‌ (ಭಾರತ); ಮಾಸ್ಟರ್ಸ್‌ ವಿಭಾಗ (35 ರಿಂದ 45 ವರ್ಷದೊಳಗಿನವರು): ಕ್ರಿಸ್‌ ಗನ್ಸ್ (ಬೆಲ್ಜಿಯಂ); ಹಿರಿಯರ ವಿಭಾಗ (45 ವರ್ಷಕ್ಕಿಂತ ಮೇಲಿನವರು): ಪಾಲ್‌ ಸ್ಟುವರ್ಟ್‌ ರೈಟ್‌ (ಬ್ರಿಟನ್); ಮಹಿಳೆಯರ ವಿಭಾಗ: ಕಟ್ಜಾ ಲಿಲ್‌ ಜೆನ್ಸನ್‌ (ಡೆನ್ಮಾರ್ಕ್) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.