ಭಾರತ ಬಾಕ್ಸಿಂಗ್ ತಂಡಕ್ಕೆ ಕುಟ್ಟಪ್ಪ ಕೋಚ್‌ ನವದೆಹಲಿ: ಮೈಸೂರಿನ ಸಿ.ಎ.ಕುಟ್ಟಪ್ಪ ಅವರು ಭಾರತ ಬಾಕ್ಸಿಂಗ್ ತಂಡದ ಮುಖ್ಯ ಕೋಚ್ ಆಗಿ ಬುಧವಾರ ನೇಮಕಗೊಂಡಿದ್ದಾರೆ. ಸದ್ಯ ನಡೆಯುತ್ತಿರುವ ರಾಷ್ಟ್ರೀಯ ಶಿಬಿರದಲ್ಲಿ ಅವರು ತರಬೇತಿ ನೀಡಲಿದ್ದಾರೆ. ಹಿರಿಯ ಬಾಕ್ಸರ್‌, ಎಸ್‌.ಆರ್.ಸಿಂಗ್‌ ಅವರ ನಿವೃತ್ತಿಯ ಕಾರಣ ಕುಟ್ಟಪ್ಪ ಅವರ ಹೆಗಲಿಗೆ ಈ ಹೊಣೆಯನ್ನು ವಹಿಸಲಾಗಿದೆ. ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತ 39 ವರ್ಷದ ಕುಟ್ಟಪ್ಪ ಅವರು ದೇಶದ ಪ್ರಮುಖ ಬಾಕ್ಸರ್‌ಗಳನ್ನು ಬೆಳೆಸಿದ ಶ್ರೇಯ ಹೊಂದಿದ್ದಾರೆ. ವಿಜೇಂದರ್ ಸಿಂಗ್‌, ಎಂ.ಸುರಂಜಯ್ ಸಿಂಗ್‌, ಶಿವ ಥಾಪ ಮುಂತಾದವರು ಕುಟ್ಟಪ್ಪ ಗರಡಿಯಲ್ಲಿ ಪಳಗಿದವರು. ಹೈ ಪರ್ಫಾರ್ಮೆನ್ಸ್‌ ನಿರ್ದೇಶಕ ಸ್ಯಾಂಟಿಯಾಗೊ ನಿವ್ಯಾ ಶಿಫಾರಸಿನ ಮೇಲೆ ಈ ನೇಮಕಾತಿ ನಡೆದಿದೆ ಎನ್ನಲಾಗಿದೆ. ‘ಇದು ದೊಡ್ಡ ಜವಾಬ್ದಾರಿ. ಇದನ್ನು ನಿರ್ವಹಿಸಲು ಸಿದ್ಧನಿದ್ದೇನೆ. ಭಾರತದ ಬಾಕ್ಸಿಂಗ್‌ ಅನ್ನು ವಿಶ್ವಮಾನ್ಯಗೊಳಿಸಲು ಪ್ರಯತ್ನಿಸಲಿದ್ದೇನೆ’ ಎಂದು ಕುಟ್ಟಪ್ಪ ಹೇಳಿದ್ದಾರೆ. ‘ಕೋಚ್‌ ಆಗಲು ಇಷ್ಟವಿದೆಯೇ ಎಂದು ಸ್ಯಾಂಟಿಯಾಗೊ ಅವರು ಇತ್ತೀಚೆಗೆ ಕೇಳಿದ್ದರು. ನಾನು ಸ್ವಲ್ಪ ಕಾಲಾವಕಾಶ ಕೋರಿದ್ದೆ. ವಯಸ್ಸು ಮತ್ತು ಸೇವೆಯಲ್ಲಿ ಹೆಚ್ಚು ಹಿರಿಯನಲ್ಲದ ಕಾರಣ ನನಗೆ ಅಳುಕು ಕಾಡುತ್ತಿತ್ತು. ಈ ವಿಷಯವನ್ನು ಸ್ಯಾಂಟಿಯಾಗೊ ಅವರಿಗೆ ತಿಳಿಸಿದೆ. ಅವರು ಅದರ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ ಎಂದರು. ಆದ್ದರಿಂದ ಒಪ್ಪಿಕೊಳ್ಳಲು ನಿರ್ಧರಿಸಿದೆ’ ಎಂದು ಅವರು ಹೇಳಿದರು. ರಾಷ್ಟ್ರೀಯ ಕೂಟದಲ್ಲಿ ಕರ್ನಾಟಕಕ್ಕೆ ಚಿನ್ನ ತಂದುಕೊಟ್ಟಿದ್ದ ಕುಟ್ಟಪ್ಪ ನಂತರ ಸೇನೆ ಸೇರಿದ್ದರು. ಗುವಾಹಟಿಯಲ್ಲಿ ಜನವರಿಯಲ್ಲಿ ನಡೆಯಲಿರುವ ಇಂಡಿಯಾ ಓಪನ್‌ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನ ಎರಡನೇ ಆವೃತ್ತಿಯಲ್ಲಿ ರಾಷ್ಟ್ರಕ್ಕೆ ಹೆಸರು ತಂದುಕೊಡುವುದು ಅವರ ಮೇಲಿರುವ ಸದ್ಯದ ದೊಡ್ಡ ಜವಾಬ್ದಾರಿ. ಸಹಾಯಕ ಕೋಚ್‌ಗಳ ಆಯ್ಕೆ ವಿವಾದ: ಸರ್ವಿಸಸ್ ಸ್ಪೋರ್ಟ್ಸ್ ಕಂಟ್ರೋಲ್‌ ಬೋರ್ಡ್‌ (ಎಸ್‌ಎಸ್‌ಸಿಬಿ) ಹಾಲಿ ರಾಷ್ಟ್ರೀಯ ಚಾಂಪಿಯನ್‌. ಆದರೆ ಸಹಾಯಕ ಕೋಚ್‌ಗಳ ಆಯ್ಕೆ ಸಂದರ್ಭದಲ್ಲಿ ಈ ಸಂಸ್ಥೆಗೆ ಪ್ರಾತಿನಿಧ್ಯ ನೀಡಲಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಈ ಕುರಿತು ಬಾಕ್ಸಿಂಗ್ ಫೆಡರೇಷನ್‌ಗೆ ಕ್ರೀಡಾ ಸಚಿವಾಲಯ ನೋಟಿಸ್ ಕೂಡ ಕಳುಹಿಸಿದೆ ಎಂದು ಹೇಳಲಾಗಿದೆ. ಕಾಮನ್‌ವೆಲ್ತ್ ಕೂಟದಲ್ಲಿ ಚಿನ್ನ ಗೆದ್ದಿದ್ದ ವಿಕಾಸ್ ಕೃಷ್ಣನ್‌ ಅವರನ್ನು ಶಿಬಿರದಿಂದ ಕೈಬಿಟ್ಟದ್ದು ಕೂಡ ವಿವಾದ ಆಗಿತ್ತು. ಅಮೆರಿಕದ ಬಾಬ್‌ ಆರಮ್ ಜೊತೆ ಒಪ್ಪಂದ ಮಾಡಿಕೊಂಡ ಕಾರಣ ವಿಕಾಸ್‌ ಅವರನ್ನು ಕೈಬಿಡಲಾಗಿತ್ತು. ಕಾಮನ್‌ವೆಲ್ತ್ ಕೂಟದಲ್ಲಿ ಪದಕ ಗೆದ್ದಿದ್ದ ಮನೋಜ್ ಕುಮಾರ್ ಅವರನ್ನು ಕೂಡ ಕೈಬಿಡಲಾಗಿದೆ. ವಿವಾದಾಸ್ಪದ ಹೇಳಿಕೆ ನೀಡಿದ ಕಾರಣ ಅವರ ಮೇಲೆ ಫೆಡರೇಷನ್ ಕೆಂಗಣ್ಣು ಬೀರಿತ್ತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.