ಉದ್ದೀಪನ ಮದ್ದು ಸೇವನೆ ಆರೋಪ: ಐವರು ವೇಟ್‌ಲಿಫ್ಟರ್‌ಗಳ ಅಮಾನತು ಪ್ಯಾರಿಸ್‌: ನಿಷೇಧಿತ ಉದ್ದೀಪನ ಮದ್ದು ಸೇವನೆ ಆರೋಪದ ಮೇಲೆ ಇಬ್ಬರು ಒಲಿಂಪಿಕ್‌ ಚಾಂಪಿಯನ್ಸ್‌ ಸೇರಿ ಐವರು ವೇಟ್‌ಲಿಫ್ಟರ್‌ಗಳನ್ನು ತಾತ್ಕಾಲಿಕವಾಗಿ ಅಮಾನತು ಮಾಡಲಾಗಿದೆ ಎಂದು ಅಂತರರಾಷ್ಟ್ರೀಯ ವೇಟ್‌ಲಿಫ್ಟಿಂಗ್‌ ಫೆಡರೇಷನ್‌ (ಐಡಬ್ಲ್ಯುಎಲ್‌ಎಫ್‌) ಸೋಮವಾರ ತಿಳಿಸಿದೆ. 2012 ಲಂಡನ್‌ ಒಲಿಂಪಿಕ್ಸ್‌ನಲ್ಲಿ ನೀಡಿದ್ದ ಮಾದರಿಯನ್ನು ಪುನ ಪರಿಶೀಲಿಸಿದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಒಲಿಂಪಿಕ್ಸ್‌ನ 105 ಕೆ.ಜಿ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದ ಉಕ್ರೇನ್‌ನ ಒಲೆಕ್ಸಿಯ ಟೊರೊಕ್ತಿಯಾ ಮತ್ತು ರಿಯೊ ಡಿ ಜನೇರೊ ಕೂಟದಲ್ಲಿ ಪದಕ ಜಯಿಸಿದ್ದ ಉಜ್ಬೆಕಿಸ್ತಾನದ ರುಸ್ಲನ್‌ ನೂರುದಿನೊವ್‌ ಅನಬೊಲಿಕ್‌ ಸ್ಟೆರಾಯ್ಡ್‌ ಬಳಸಿರುವುದು ದೃಢಪಟ್ಟಿದೆ. ಅಜೆರ್ಬೈಜಾನ್‌ನ ವ್ಯಾಲೆಂಟಿನ್‌ ಹ್ರಿಸ್ಟವ್‌, 2013 ಮತ್ತು 2015ರಲ್ಲಿ ನಡೆಸಿದ ಡೋಪಿಂಗ್‌ ಪರೀಕ್ಷೆಯಲ್ಲಿ ಉದ್ದೀಪನಾ ಮದ್ದು ಸೇವನೆ ಮಾಡಿರುವುದು ಖಚಿತವಾಗಿದ್ದು, ಈಗಾಗಲೇ ಅವರ ಮೇಲೆ ಎಂಟು ವರ್ಷಗಳ ನಿಷೇಧ ಹೇರಲಾಗಿದೆ. ಈಗ ನಡೆಸಿರುವ ಅನಾಬಲಿಕ್‌ ಪರೀಕ್ಷೆಯಲ್ಲಿ ಸ್ಟೆರಾಯ್ಡ್‌ ಸೇವನೆ ಖಚಿತವಾದರೆ 2012ರ ಒಲಿಂಪಿಕ್ಸ್‌ನ 56 ಕೆ.ಜಿ ವಿಭಾಗದಲ್ಲಿ ಜಯಿಸಿದ್ದ ಕಂಚಿನ ಪದಕವನ್ನು ಅವರು ಕಳೆದುಕೊಳ್ಳಲಿದ್ದಾರೆ. ಅರ್ಮೇನಿಯಾದ ಮೆಲಿನ್‌ ಡಾಲುಜಿಯಾ ಮತ್ತು ಬೆಲಾರಸ್‌ನ ಮಿಕಲೈ ನೋವಿಕಾ ಅವರು ಅನಾಬಲಿಕ್‌ ಸ್ಟಿರಾಯ್ಡ್‌ ಬಳಸಿರುವುದು ಪರೀಕ್ಷೆಯಿಂದ ಸಾಬೀತಾಗಿದೆ ಎನ್ನಲಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.