ಪ್ರೊ ಕಬಡ್ಡಿ: ಯೋಧಾ–ಡೆಲ್ಲಿ ಎಲಿಮಿನೇಟರ್‌ ಹಣಾಹಣಿ ಕೊಚ್ಚಿ: ಯು.ಪಿ.ಯೋಧಾ ಮತ್ತು ದಬಂಗ್ ಡೆಲ್ಲಿ ತಂಡಗಳು ಪ್ರೊ ಕಬಡ್ಡಿ ಲೀಗ್‌ನ ಮೂರನೇ ಎಲಿಮಿನೇಟರ್ ಪಂದ್ಯದಲ್ಲಿ ಸೋಮವಾರ ಸೆಣಸಲಿವೆ. ಇಲ್ಲಿನ ರಾಜೀವ ಗಾಂಧಿ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ನಡೆದ ಮೊದಲ ಎಲಿಮಿನೇಟರ್ ಪಂದ್ಯದಲ್ಲಿ ಯು.ಪಿ.ಯೋಧಾ 34–29ರಿಂದ ಮಣಿಸಿತು. ಎರಡನೇ ಎಲಿಮಿನೇಟರ್ ಪಂದ್ಯದಲ್ಲಿ ದಬಂಗ್ ಡೆಲ್ಲಿ, 39–28ರಿಂದ ಬೆಂಗಾಲ್ ವಾರಿಯರ್ಸ್ ಎದುರು ಗೆದ್ದಿತು. ಮುಂಬಾ ಮತ್ತು ವಾರಿಯರ್ಸ್ ತಂಡಗಳು ಟೂರ್ನಿಯಿಂದ ಹೊರಬಿದ್ದವು. ಮೊದಲ ಪಂದ್ಯದಲ್ಲಿ ಯು.ಪಿ.ಯೋಧಾ ತಂಡದವರು ಸಂಘಟಿತ ಹೋರಾಟ ನಡೆಸಿದರು. ತಲಾ ಎಂಟು ಮತ್ತು ಐದು ಟ್ಯಾಕ್ಲಿಂಗ್ ಪಾಯಿಂಟ್ ಕಲೆ ಹಾಕಿದ ತಂಡದ ನಿತೇಶ್ ಕುಮಾರ್ ಮತ್ತು ಜೀವ ಕುಮಾರ್‌ ಮಿಂಚಿದರು. ಶ್ರೀಕಾಂತ್ ಜಾಧವ್‌ 13 ರೇಡ್‌ಗಳಲ್ಲಿ ನಾಲ್ಕು ಟಚ್ ಪಾಯಿಂಟ್ ಒಳಗೊಂಡ ಐದು ಪಾಯಿಂಟ್‌ ಗಳಿಸಿದರು. ಕನ್ನಡಿಗರಾದ ರಿಷಾಂಕ್ ದೇವಾಡಿಗ ಮತ್ತು ಪ್ರಶಾಂತ್ ಕುಮಾರ್ ರೈ ತಲಾ ಐದು ಮತ್ತು ನಾಲ್ಕು ಪಾಯಿಂಟ್‌ಗಳ ಕಾಣಿಕೆ ನೀಡಿದರು. ಯು.ಮುಂಬಾ ಪರ ಸಿದ್ಧಾರ್ಥ್ ದೇಸಾಯಿ ಏಳು ಪಾಯಿಂಟ್ ಗಳಿಸಿದರು. ಉಳಿದವರಿಗೆ ನಿರೀಕ್ಷಿತ ಸಾಮರ್ಥ್ಯ ತೋರಲು ಆಗಲಿಲ್ಲ. ಡೆಲ್ಲಿ ತಂಡದ ಪರ ನವೀನ್ ಕುಮಾರ್‌ 11 ಮತ್ತು ಚಂದ್ರನ್ ರಂಜಿತ್‌ ಎಂಟು ಪಾಯಿಂಟ್ ಗಳಿಸಿದರು. ರವೀಂದ್ರ ಪೆಹಲ್‌ ನಾಲ್ಕು ಟ್ಯಾಕ್ಲಿಂಗ್ ಪಾಯಿಂಟ್ ಗಳಿಸಿದರು. ಬೆಂಗಾಲ್ ತಂಡದ ಪ್ರಮುಖ ಆಟಗಾರರು ಮಿಂಚಲು ವಿಫಲರಾದರು. ಮಣಿಂದರ್ ಸಿಂಗ್ ಎಂಟು ಪಾಯಿಂಟ್ ಬಗಲಿಗೆ ಹಾಕಿದರು. ಇಂದಿನ ಪಂದ್ಯಗಳು ಕ್ವಾಲಿಫೈಯರ್ 1 ಬೆಂಗಳೂರು ಬುಲ್ಸ್‌ –ಗುಜರಾತ್ ಫಾರ್ಚೂನ್‌ಜೈಂಟ್ಸ್‌ ರಾತ್ರಿ 8.00 *** ಮೂರನೇ ಎಲಿಮಿನೇಟರ್‌ ಯು.ಪಿ.ಯೋಧಾ–ದಬಂಗ್ ಡೆಲ್ಲಿ ರಾತ್ರಿ 9.00 ನೇರ ಪ್ರಸಾರ: ಸ್ಟಾರ್‌ ನೆಟ್‌ವರ್ಕ್‌ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.