ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್ ಚೆನ್ನೈ ಸ್ಮ್ಯಾಷರ್ಸ್‌ಗೆ ಭರ್ಜರಿ ಗೆಲುವು ಪುಣೆ : ಚೆನ್ನೈ ಸ್ಮ್ಯಾಷರ್ಸ್‌ ತಂಡ, ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್ (ಪಿಬಿಎಲ್‌) ಟೂರ್ನಿಯಲ್ಲಿ ಭರ್ಜರಿ ಜಯ ಸಾಧಿಸಿತು. ಇಲ್ಲಿನ ಬಾಲೇವಾಡಿ ಕ್ರೀಡಾ ಸಂಕೀರ್ಣದಲ್ಲಿ ಭಾನುವಾರ ರಾತ್ರಿ ನಡೆದ ಹಣಾಹಣಿಯಲ್ಲಿ ಚೆನ್ನೈ ತಂಡ ಅಹಮದಾಬಾದ್ ಸ್ಮ್ಯಾಷ್ ಮಾಸ್ಟರ್ಸ್‌ ಎದುರಿನ ಎಲ್ಲ ಪಂದ್ಯಗಳನ್ನು ಗೆಲ್ಲುವ ಮೂಲಕ 6–0ಯಿಂದ ಗೆಲುವು ತನ್ನದಾ ಗಿಸಿಕೊಂಡಿತು. ಅಹಮದಾಬಾದ್ ಪರವಾಗಿ ಮೊದಲ ಪಂದ್ಯದಲ್ಲಿ ಕಣಕ್ಕೆ ಇಳಿದ ಸಮೀರ್ ವರ್ಮಾ 15–8, 14–15, 9–15ರಿಂದ ಚಾಂಗ್ ವಿರುದ್ಧ ಸೋತರು. ಅಮೋಘ ಆಟದ ಮೂಲಕ ಮೊದಲ ಗೇಮ್‌ನಲ್ಲಿ ಗೆದ್ದ ಸಮೀರ್‌ ಭರವಸೆ ಮೂಡಿಸಿದರು. ಆದರೆ ನಂತರ ಎದುರಾಳಿಯ ಆಟಕ್ಕೆ ಉತ್ತರ ನೀಡಲು ಸಾಧ್ಯವಾಗದೆ ನಿರಾಸೆಗೆ ಒಳ ಗಾದರು. ಎರಡನೇ ಪಂದ್ಯ(ಮಿಶ್ರ ಡಬಲ್ಸ್‌)ದಲ್ಲೂ ಚೆನ್ನೈ ತಂಡ ಗೆದ್ದಿತು. ಇಂಗ್ಲೆಂಡ್‌ನ ದಂಪತಿ ಕ್ರಿಸ್‌ ಅಡ್ಕಾಕ್‌ ಮತ್ತು ಗ್ಯಾಬಿ ಅಡ್ಕಾಕ್‌ ಜೋಡಿ, ರಣಕಿ ರೆಡ್ಡಿ ಮತ್ತು ಸಿಕ್ಕಿ ರೆಡ್ಡಿ ಜೋಡಿಯನ್ನು 15–14, 15–13 ರಿಂದ ಸೋಲಿಸಿ ಮುನ್ನಡೆ ಹೆಚ್ಚಿ ಕೊಂಡಿತು. ಮಹತ್ವದ ಮೂರನೇ ಪಂದ್ಯದಲ್ಲಿ ಅಹಮದಾಬಾದ್‌ ಭಾರಿ ನಿರಾಸೆ ಕಂಡಿತು. ಇದು ತಂಡದ ಟ್ರಂಪ್‌ ಪಂದ್ಯ ಆಗಿತ್ತು. ವಿಕ್ಟರ್ ಅವರನ್ನು ರಾಜೀವ್ ಔಸೇಪ್‌ 15–12, 7–15, 15–13ರಿಂದ ಸೋಲಿಸಿ ಚೆನ್ನೈ ತಂಡದ ಮುನ್ನಡೆಯ ಅಂತರವನ್ನು 4–0ಗೆ ಹೆಚ್ಚಿಸಿದರು. ಸಂಗ್ ಜಿ ಹ್ಯೂನ್‌ ನಾಲ್ಕನೇ ಪಂದ್ಯದಲ್ಲಿ ಚೆನ್ನೈಗೆ ಜಯ ಗಳಿಸಿಕೊಟ್ಟರು. ಇದು ಈ ತಂಡದ ಟ್ರಂಪ್ ಪಂದ್ಯ ಆಗಿತ್ತು. ಗಿಲ್ಮರ್ ಎದುರು ಹ್ಯೂನ್‌ 15–11, 15–9ರಿಂದ ಗೆದ್ದರು. ಸಮಾಧಾನಕರ ಜಯದ ಆಸೆಯೊಂದಿಗೆ ಕಣಕ್ಕೆ ಇಳಿದ ರಿಜಿನಾಲ್ಡ್ ಮತ್ತು ರಣಕಿ ರೆಡ್ಡಿ ಜೋಡಿಗೂ ಅಹಮದಾಬಾದ್‌ಗೆ ಜಯ ತಂದುಕೊಡಲು ಆಗಲಿಲ್ಲ. ಸುಮೀತ್‌ ರೆಡ್ಡಿ ಮತ್ತು ಕ್ರಿಸ್‌ ಅಡ್ಕಾಕ್‌ ಜೋಡಿ 15–12, 15–11ರಿಂದ ಗೆದ್ದು ಸಂಭ್ರಮಿಸಿದರು. ಮತ್ತೊಂದು ಹಣಾಹಣಿಯಲ್ಲಿ ಬೆಂಗಳೂರು ರ‍್ಯಾಪ್ಟರ್ಸ್‌ ತಂಡ ಭರ್ಜರಿ ಆಟವಾಡಿ 4–3ರಲ್ಲಿ ಪುಣೆ ಸೆವೆನ್ ಏಸಸ್ ಎದುರು ಗೆಲವು ಸಾಧಿಸಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.