ಪ್ರಶಸ್ತಿ ಸುತ್ತಿಗೆ ಬೆಂಗಳೂರು ಬುಲ್ಸ್ ಕೊಚ್ಚಿ : ರೇಡರ್‌ ಪವನ್ ಶೆರಾವತ್‌ ಮತ್ತು ನಾಯಕ ರೋಹಿತ್ ಕುಮಾರ್ ಮತ್ತೊಮ್ಮೆ ಮಿಂಚಿನ ಆಟ ಆಡಿದರು. ಇದರ ಪರಿಣಾಮ, ಬೆಂಗಳೂರು ಬುಲ್ಸ್ ತಂಡ ಪ್ರೊ ಕಬಡ್ಡಿ ಲೀಗ್‌ನ ಆರನೇ ಆವೃತ್ತಿಯ ಪ್ರಶಸ್ತಿ ಸುತ್ತಿಗೆ ಲಗ್ಗೆ ಇರಿಸಿತು. ಇಲ್ಲಿನ ರಾಜೀವಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ಸೋಮವಾರ ರಾತ್ರಿ ನಡೆದ ಮೊಲದ ಕ್ವಾಲಿಫೈಯರ್ ಪಂದ್ಯದಲ್ಲಿ ಬುಲ್ಸ್‌ 41–29ರಿಂದ ಗುಜರಾಜತ್ ಫಾರ್ಚೂನ್‌ಜೈಂಟ್ಸ್ ವಿರುದ್ಧ ಗೆಲುವು ಸಾಧಿಸಿತು. ಟೂರ್ನಿಯ ಉದ್ದಕ್ಕೂ ಅಮೋಘ ರೇಡಿಂಗ್ ಮೂಲಕ ಕಬಡ್ಡಿ ಪ್ರಿಯರ ಗಮನ ಸೆಳೆದಿದ್ದ ಪವನ್ ಶೆರಾವತ್‌ ಇಲ್ಲಿ ಮೋಹಕ ಆಟದ ಮೂಲಕ ರಂಜಿಸಿದರು. 13 ಬಾರಿ ಎದುರಾಳಿ ತಂಡದ ಕೋಟೆಗೆ ನುಗ್ಗಿದ ಅವರು ಒಟ್ಟು 13 ಪಾಯಿಂಟ್‌ಗಳೊಂದಿಗೆ ಮಿಂಚಿದರು. ಅವರು ಗಳಿಸಿದ್ದೆಲ್ಲವೂ ಟಚ್ ಪಾಯಿಂಟ್‌ಗಳು. ಮತ್ತೊಂದೆಡೆ ರೋಹಿತ್ ಕುಮಾರ್ ಆಲ್‌ರೌಂಡ್ ಆಟವಾಡಿ ‘ದೇವರ ನಾಡಿನ’ ಕ್ರೀಡಾ ಪ್ರಿಯರನ್ನು ರೋಮಾಂಚನಗೊಳಿಸಿದರು. 17 ರೇಡ್‌ ಗಳನ್ನು ಮಾಡಿದ ಅವರು ಒಟ್ಟು 11 ಪಾಯಿಂಟ್ ಗಳಿಸಿದರು. ತಲಾ ಮೂರು ಟಚ್ ಪಾಯಿಂಟ್ ಮತ್ತು ಬೋನಸ್ ಗಳಿಸಿದ ಅವರು ಐದು ಟ್ಯಾಕ್ಲಿಂಗ್ ಪಾಯಿಂಟ್‌ಗಳೊಂದಿಗೆ ತಂಡದ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದರು. ಮಹೇಂದ್ರ ಸಿಂಗ್ ಆರು ಟ್ಯಾಕ್ಲಿಂಗ್ ಪಾಯಿಂಟ್‌ಗಳೊಂದಿಗೆ ಇವರಿಬ್ಬರಿಗೆ ಉತ್ತಮ ಸಹಕಾರ ನೀಡಿದರು. ಗುಜರಾತ್ ಫಾರ್ಚೂನ್ ಜೈಂಟ್ಸ್ ಪರ ಸಚಿನ್ ಏಕಾಂಗಿ ಹೋರಾಟ ನಡೆಸಿದರು. 12 ರೇಡ್‌ಗಳಲ್ಲಿ 10 ಪಾಯಿಂಟ್ ಗಳಸಿದರು. ಪ್ರಪಂಚನ್‌ ಐದು ಮತ್ತು ರೋಹಿತ್ ಗುಲಿಯಾ ಮೂರು ಪಾಯಿಂಟ್ ಕಲೆ ಹಾಕಿದರು. ಆರಂಭದಲ್ಲಿ ಸಮಬಲದ ಹಣಾಹಣಿ: ಪಂದ್ಯದ ಮೊದಲಾರ್ಧದಲ್ಲಿ ಉಭಯ ತಂಡಗಳು ಸಮಬಲದಿಂದ ಕಾದಾಡಿದವು. ಹೀಗಾಗಿ ಸ್ಕೋರ್‌ 6–6, 8–8, 11–11ರಲ್ಲಿ ಸಾಗಿತು. ಕ್ರಮೇಣ ಆಕ್ರಮಣವನ್ನು ಹೆಚ್ಚಿಸಿದ ಬೆಂಗಳೂರು ಬುಲ್ಸ್‌ ಪಾಯಿಂಟ್‌ಗಳನ್ನು ಹೆಚ್ಚಿಸುತ್ತ ಸಾಗಿತು. ಆದರೆ ತಿರುಗೇಟು ನೀಡಿದ ಫಾರ್ಚೂನ್‌ಜೈಂಟ್ಸ್ ಮೊದಲಾರ್ಧದ ಮುಕ್ತಾಯಕ್ಕೆ 14–13ರ ಮುನ್ನಡೆ ಸಾಧಿಸಿತ್ತು. ದ್ವಿತೀಯಾರ್ಧದಲ್ಲೂ ಪಂದ್ಯ ಸಮಬಲದ ಹೋರಾಟಕ್ಕೆ ಸಾಕ್ಷಿಯಾಯಿತು. ಕೊನೆಯ ಏಳು ನಿಮಿಷ ಉಳಿದಿರುವಾಗ ಎರಡು ಪಾಯಿಂಟ್‌ಗಳ ಹಿನ್ನಡೆ ಅನುಭವಿಸಿದ್ದ ಬುಲ್ಸ್‌ ನಂತರ ಭರ್ಜರಿ ಆಟದ ಮೂಲಕ ಗೆಲುವಿನ ಹಾದಿಯಲ್ಲಿ ಹೆಜ್ಜೆ ಹಾಕಿತು. ರೋಹಿತ್ ಮತ್ತು ಪವನ್‌ ಪಾಯಿಂಟ್‌ಗಳನ್ನು ಹೆಕ್ಕಿ ತಂದು ತಂಡದಲ್ಲಿ ಸಂಭ್ರಮ ಮೂಡಿಸಿದರು. ಯೋಧಾ–ಫಾರ್ಚೂನ್‌ಜೈಂಟ್ಸ್ ಹಣಾಹಣಿ ಗುರುವಾರ ಮುಂಬೈನಲ್ಲಿ ನಡೆಯಲಿರುವ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಯು.ಪಿ.ಯೋಧಾ ಮತ್ತು ಗುಜರಾತ್ ಫಾರ್ಚೂನ್‌ಜೈಂಟ್ಸ್ ತಂಡಗಳು ಸೆಣಸಲಿವೆ. ಈ ಪಂದ್ಯದಲ್ಲಿ ಗೆದ್ದ ತಂಡ ಜನವರಿ ಐದರಂದು ಫೈನಲ್‌ನಲ್ಲಿ ಬುಲ್ಸ್ ವಿರುದ್ಧ ಆಡಲಿದೆ. ಸೋಮವಾರ ರಾತ್ರಿ ನಡೆದ ಮೂರನೇ ಎಲಿಮಿನೇಟರ್ ಪಂದ್ಯದಲ್ಲಿ ಯು.ಪಿ.ಯೋಧಾ, ದಬಂಗ್ ಡೆಲ್ಲಿ ತಂಡವನ್ನು 45–33ರಿಂದ ಮಣಿಸಿತು. ಕನ್ನಡಿಗರಾದ ಪ್ರಶಾಂತ್ ಕುಮಾರ್ ರೈ ಮತ್ತು ರಿಷಾಂಕ್ ದೇವಾಡಿಗ ಯೋಧಾ ತಂಡದ ಗೆಲುವಿಗೆ ಕಾರಣರಾದರು. ಇವರಿಬ್ಬರು ಕ್ರಮವಾಗಿ ಕ್ರಮವಾಗಿ 13 ಮತ್ತು ಎಂಟು ಪಾಯಿಂಟ್ ಗಳಿಸಿದರು. ಡೆಲ್ಲಿ ಪರವಾಗಿ ನವೀನ್ ಕುಮಾರ್ ಮತ್ತು ಚಂದ್ರನ್ ರಂಜಿತ್‌ ಕ್ರಮವಾಗಿ 10 ಮತ್ತು ಏಳು ಪಾಯಿಂಟ್ ಗಳಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.