ಒಳಗಣ್ಣಿನ ಚಿನ್ನದ ಹುಡುಗ ಕಿಶನ್ ಶಿವಮೊಗ್ಗ: ಇಂಡೋನೇಷ್ಯಾದ ಜಕಾರ್ತಾದಲ್ಲಿ ನಡೆದ ಏಷ್ಯನ್ ಪ್ಯಾರಾಗೇಮ್ಸ್‌ನ ಚೆಸ್‌ ಪಂದ್ಯದಲ್ಲಿ ಚಿನ್ನದ ಪದಕಕ್ಕೆ ಕೊರಳೊಡ್ಡಿ ಬಂದ ಕಿಶನ್‌ ಗಂಗೊಳ್ಳಿ ಅವರಿಗೆ ದೃಷ್ಟಿ ಇಲ್ಲ. ಆದರೆ, ಅವರ ಅಂತಃಚಕ್ಷು ಬೆರಗು ಮೂಡಿಸುವಂಥದ್ದು. ಇಲ್ಲಿನ ವಿನೋಬನಗರದ ಕಿಶನ್ ಗಂಗೊಳ್ಳಿ ಅಕ್ಟೋಬರ್‌ 2018ರಲ್ಲಿ ಚಿನ್ನದ ಹುಡುಗ ಆದಮೇಲೆ ಮುಂದಿನ ವರ್ಷ ಈಡೇರಿಸಿಕೊಳ್ಳಬೇಕಾದ ಕನಸುಗಳ ಪರಿಧಿ ಹಿಗ್ಗಿದೆ. ಸರ್ಕಾರದ ಪ್ರೋತ್ಸಾಹ ಪಡೆದು ಚೆಸ್‌ನಲ್ಲೇ ಉನ್ನತ ಸಾಧನೆ ಮಾಡಲು ನಿರ್ಧರಿಸಿರುವ ಅವರಿಗೆ ವಿಶ್ವ ಚಾಂಪಿಯನ್‌ ಆಗಬೇಕು ಎನ್ನುವ ಗುರಿ ಇದೆ. ಆ ನಿಟ್ಟಿನಲ್ಲಿ ಹೊಸವರ್ಷದಲ್ಲೂ ಹೆಜ್ಜೆಗಳನ್ನಿಡಲು ಉತ್ಸುಕರಾಗಿದ್ದಾರೆ. ಅಂತರರಾಷ್ಟ್ರೀಯ ತರಬೇತಿದಾರನಾಗಬೇಕು ಎನ್ನುವುದು ಅವರ ಅಭಿಲಾಷೆ. ಕಿಶನ್ ಚೆಸ್‌ ಆಟದಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದು 11ನೇ ವಯಸ್ಸಿನಲ್ಲಿ, ಸೋದರ ಮಾವ ಸಂತೋಷ್‌ ಪ್ರೇರಣೆಯಿಂದ. ಆಸಕ್ತಿಗೆ ವೃತ್ತಿಪರತೆಯ ಚೌಕಟ್ಟು ಹಾಕಿದ್ದು ತಾಯಿ ಗೀತಾ ಹಾಗೂ ನಳಂದ ಚೆಸ್‌ ಅಕಾಡೆಮಿಯಲ್ಲಿನ ಅಂಧ ಕೋಚ್ ಶ್ರೀಕೃಷ್ಣ ಉಡುಪ. ಕುವೆಂಪು ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಕಿಶನ್, 2012ರಲ್ಲಿ ಚೆನ್ನೈನಲ್ಲಿ ನಡೆದ ಒಲಿಂಪಿಯಾಡ್‌ನಲ್ಲಿ ಬಂಗಾರ ಗೆದ್ದಾಗ ಆತ್ಮಬಲ ಹೆಚ್ಚಾಯಿತು. 2017ರಲ್ಲಿ ಮೆಸಿಡೋನಿಯಾದಲ್ಲಿ ನಡೆದ ಒಲಿಂಪಿಯಾಡ್‌ನಲ್ಲಿ ಕಂಚಿನ ಪದಕ ಒಲಿಯಿತು. 2012ರ ಏಷ್ಯನ್ ಚಾಂಪಿಯನ್‌ನಲ್ಲಿ ಇನ್ನೊಂದು ಚಿನ್ನಕ್ಕೆ ಕೊರಳೊಡ್ಡಿದ ಅವರು, 2014ರಲ್ಲಿ ಗ್ರೀಕ್‌ನಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ 6ನೇ ಸ್ಥಾನ ಗಿಟ್ಟಿಸಿಕೊಂಡರು. ಅಂಧರ ಚೆಸ್‌ ವಿಭಾಗದಲ್ಲಿ ಇಂತಹ ಸಾಧನೆ ಮಾಡಿದ ಭಾರತದ ಮೊದಲಿಗ ಎಂಬ ಹೆಗ್ಗಳಿಕೆ ಅವರದ್ದು. ಚೆಸ್‌ ಅಧಿಕ ವೆಚ್ಚದ ಕ್ರೀಡೆ. ತರಬೇತಿಗಾಗಿಯೇ ಹೆಚ್ಚು ಹಣ ವ್ಯಯಿಸಬೇಕು. ಬ್ಯೂಟಿಷಿಯನ್ ಆಗಿರುವ ತಾಯಿ ಗೀತಾ ಮಗನ ಕನಸನ್ನು ನನಸು ಮಾಡಲು ಎಲ್ಲಾ ಖರ್ಚನ್ನು ಭರಿಸುತ್ತಿದ್ದಾರೆ. ‘ಏಷ್ಯನ್ ಪ್ಯಾರಾಗೇಮ್ಸ್‌ ನಂತರ ಅಭಿನಂದಿಸಿದ್ದ ಪ್ರಧಾನಿ ಮೋದಿ, ಇತರೆ ಆಟಗಾರರಿಗೆ ನೀಡುವ ಗೌರವಧನವನ್ನು ನನಗೂ ದಕ್ಕಿಸಿಕೊಡುವ ಭರವಸೆ ನೀಡಿದ್ದರು. ಅದರಂತೆ ಕೇಂದ್ರ ಸರ್ಕಾರದಿಂದ ₹ 30 ಲಕ್ಷ ನೆರವು ಸಿಕ್ಕಿದೆ. ಆ ಹಣವನ್ನೇ ಮುಂದಿನ ಸಾಧನೆಗೆ, ಹೆಚ್ಚಿನ ತರಬೇತಿಗೆ ಬಳಸಿಕೊಳ್ಳುತ್ತೇನೆ’ ಎನ್ನುವ 26ರ ಹರೆಯದ ಕಿಶನ್‌ ಅವರಿಗೆ ರಾಜ್ಯ ಸರ್ಕಾರ ಇದುವರೆಗೂ ಸಾಧನೆ ಗುರುತಿಸಿಲ್ಲ ಎನ್ನುವ ಬೇಸರವೂ ಇದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.