ಪಿಬಿಎಲ್‌: ರಾಕೆಟ್ಸ್‌ಗೆ ಮಣಿದ ಅವಧ್‌ ವಾರಿಯರ್ಸ್‌ ಪುಣೆ: ಲೀ ಯಾಂಗ್ ಡಾ ಮತ್ತು ಕಿಮ್ ಜಿ ಜಂಗ್‌ ಅವರ ಆಟಕ್ಕೆ ಸಮೀರ್ ವರ್ಮಾ ರಂಗು ತುಂಬಿದರು. ಇವರ ಅಮೋಘ ಆಟದ ನೆರವಿನಿಂದ ಮುಂಬೈ ರಾಕೆಟ್ಸ್ ತಂಡ ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್‌ನಲ್ಲಿ (ಪಿಬಿಎಲ್‌) ಸೋಮವಾರ ಜಯ ಗಳಿಸಿತು. ಬಾಲೇವಾಡಿಯ ಛತ್ರಪತಿ ಶಿವಾಜಿ ಕ್ರೀಡಾ ಸಂಕೀರ್ಣದಲ್ಲಿ ರಾತ್ರಿ ನಡೆದ ಹಣಾಹಣಿಯಲ್ಲಿ ಮುಂಬೈ ರಾಕೆಟ್ಸ್‌, ಅವಧ್ ವಾರಿಯರ್ಸ್‌ ತಂಡವನ್ನು 5–2ರಿಂದ ಮಣಿಸಿತು. ಮೊದಲ ಪಂದ್ಯದಲ್ಲಿ ಬೆವೆನ್ ಜಾಂಗ್, ವಾರಿಯರ್ಸ್‌ಗೆ ಗೆಲುವು ತಂದುಕೊಟ್ಟರು. ವಾರಿಯರ್ಸ್‌ನ ಟ್ರಂಪ್ ಪಂದ್ಯದಲ್ಲಿ ಅವರು ಶ್ರೀಯಾಂಶಿ ಪರದೇಶಿ ಎದುರು 15–10, 15–10ರಿಂದ ಗೆದ್ದರು. ಮುಂದಿನದು ಮುಂಬೈ ತಂಡದ ಟ್ರಂಪ್ ಪಂದ್ಯವಾಗಿತ್ತು. ಲೀ ಯಾಂಗ್ ಡಾ ಮತ್ತು ಕಿಮ್ ಜಿ ಜಂಗ್‌ ವಾರಿಯರ್ಸ್‌ನ ಲೀ ಯಾಂಗ್ ಮತ್ತು ಎಂ.ಆರ್.ಅರ್ಜುನ್ ಜೋಡಿಯನ್ನು 15–7, 15–9ರಿಂದ ಮಣಿಸಿದರು. ಮುಂದಿನ ಮೂರೂ ಪಂದ್ಯಗಳಲ್ಲಿ ಮುಂಬೈ ಗೆಲುವು ಸಾಧಿಸಿತು. ಆಂಟೊನ್ಸೆನ್‌ 6–15, 15–11, 15–14ರಿಂದ ಸಾನ್‌ ವ್ಯಾನ್ ಹೊ ಎದುರು ಗೆದ್ದರು. ಸಮೀರ್ ವರ್ಮಾ, ಲೀ ಡಾಂಗ್‌ ಕ್ಯೂನ್‌ ಎದುರು 15–11, 8–15, 15–11ರಿಂದ ಸೋಲಿಸಿದರು. ಕೊನೆಯ ಪಂದ್ಯದಲ್ಲಿ ಕಿಮ್ ಜಿ ಜುಂಗ್‌ ಮತ್ತು ಬೆರ್ದಾದೆತ್‌ ಜೋಡಿ ಕ್ರಿಶ್ಚಿಯನ್‌ಸೆನ್ ಮತ್ತು ಅಶ್ವಿನಿ ಪೊನ್ನಪ್ಪ ಜೋಡಿ ವಿರುದ್ಧ 15–10, 7–15 ಮತ್ತು 15–13ರಿಂದ ಗೆದ್ದಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.