ಅಂತರ ವಿಶ್ವವಿದ್ಯಾಲಯಗಳ ಕ್ರಿಕೆಟ್‌ ಟೂರ್ನಿ: ಮತ್ತೆ ಆ ಆಸೆಗಾಗಿ ಕಾಯುತ್ತಾ... ಪ್ರತಿ ವರ್ಷ ಅಂತರ ವಿಶ್ವವಿದ್ಯಾಲಯಗಳ ನಡುವಣ ಕ್ರಿಕೆಟ್‌ ಟೂರ್ನಿ ಆರಂಭವಾದಾಗ ‘ಈ ಬಾರಿ ನಮ್ಮ ವಿ.ವಿ. ತಂಡ ಪ್ರಶಸ್ತಿ ಗೆಲ್ಲುತ್ತಾ’ ಎನ್ನುವ ಪ್ರಶ್ನೆ ಧಾರವಾಡ ಜಿಲ್ಲೆಯ ಕ್ರಿಕೆಟ್‌ ಪ್ರೇಮಿಗಳನ್ನು ಕಾಡುತ್ತಲೇ ಇರುತ್ತದೆ. ಪ್ರತಿ ಸಲವೂ ಮುಂದಿನ ಸಲ... ಮುಂದಿನ ಸಲ... ಎಂದು ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಳ್ಳಲಾಗುತ್ತಿದೆ. ಈ ವರ್ಷ ಕೂಡ ಮತ್ತೊಂದು ವರ್ಷದ ನಿರೀಕ್ಷೆಯಲ್ಲಿಯೇ ಕಾಯುವಂತಾಯಿತು. ಮೈಸೂರಿನಲ್ಲಿ ಇತ್ತೀಚಿಗೆ ನಡೆದ ಅಂತರ ವಿಶ್ವವಿದ್ಯಾಲಯಗಳ ಕ್ರಿಕೆಟ್‌ ಟೂರ್ನಿಯಲ್ಲಿ ಧಾರವಾಡದ ಕರ್ನಾಟಕ ವಿ.ವಿ. ತಂಡ ತನ್ನ ಮೂರನೇ ಪಂದ್ಯದಲ್ಲಿ ಸೋತು ಟೂರ್ನಿಯಿಂದ ನಿರ್ಗಮಿಸಿತು. ಲೀಗ್‌ ಹಂತದ ಮೊದಲ ಪಂದ್ಯದಲ್ಲಿ ತಮಿಳುನಾಡಿನ ಫಿಜಿಕಲ್‌ ಎಜುಕೇಶನ್‌ ವಿ.ವಿ. ತಂಡದ ಮೇಲೂ, ಎರಡನೇ ಪಂದ್ಯದಲ್ಲಿ ಅಣ್ಣಮಲೈ ವಿ.ವಿ. ವಿರುದ್ಧವೂ ಗೆಲುವು ಸಾಧಿಸಿತು. ಮೂರನೇ ಪಂದ್ಯದಲ್ಲಿ ಮೈಸೂರು ವಿ.ವಿ. ಎದುರು ಪರಾಭವಗೊಂಡಿತು. ಕಳೆದ ವರ್ಷದ ಟೂರ್ನಿಯಲ್ಲಿ ಕರ್ನಾಟಕ ವಿ.ವಿ. ತಂಡ ವಿಶಾಖಪಟ್ಟಣದಲ್ಲಿ ನಡೆದಿದ್ದ ಟೂರ್ನಿಯ ಮೂರನೇ ಪಂದ್ಯದಲ್ಲಿ ಸೋತಿತ್ತು. ಚೆನ್ನೈನಲ್ಲಿ 2017ರಲ್ಲಿ ನಡೆದಿದ್ದ ಟೂರ್ನಿಯಲ್ಲಿ ಮೊದಲ ಪಂದ್ಯದಲ್ಲಿಯೇ ನಿರಾಸೆ ಕಂಡಿತ್ತು. ವಿವಿಧ ಕ್ಲಬ್‌ಗಳು, ವಯೋಮಿತಿಯೊಳಗಿನ ಟೂರ್ನಿಗಳು ಮತ್ತು ವಿವಿಧ ಪ್ರೀಮಿಯರ್‌ ಲೀಗ್‌ಗಳಲ್ಲಿ ಆಡುವ ಆಟಗಾರರು ಕರ್ನಾಟಕ ವಿ.ವಿ. ತಂಡದಲ್ಲಿದ್ದಾರೆ. ಈ ಬಾರಿಯ ತಂಡದಲ್ಲಿದ್ದ ಇಂದ್ರಸೇನ್‌ ದಾನಿ, ಕೌಸ್ತುಬ್‌, ಪರೀಕ್ಷಿತ್‌ ಒಕ್ಕುಂದ, ಸುಧನ್ವ ಕುಲಕರ್ಣಿ 19 ವರ್ಷದ ಒಳಗಿನವರ ರಾಜ್ಯ ತಂಡದಲ್ಲಿದ್ದರು. ಪ್ರತಿ ವರ್ಷ ಅಂತರ ವಿಶ್ವವಿದ್ಯಾಲಯಗಳ ಟೂರ್ನಿ ನಡೆದಾಗ ಹುಬ್ಬಳ್ಳಿ ಪ್ರೀಮಿಯರ್‌ ಲೀಗ್‌, ಬೆಳಗಾವಿ ಪ್ರೀಮಿಯರ್‌ ಲೀಗ್‌ ಟೂರ್ನಿಗಳು ಇರುತ್ತವೆ. ಆಟಗಾರರಿಗೆ ವಯೋಮಿತಿಯೊಳಗಿನ ಟೂರ್ನಿಗಳು, ಕ್ಲಬ್‌ ಹಂತದ ಪಂದ್ಯಗಳಲ್ಲಿ ಆಡಲು ಆಸಕ್ತಿ ಇರುತ್ತದೆ. ಆದ್ದರಿಂದ ವಿ.ವಿ. ಟೂರ್ನಿಗಳಲ್ಲಿ ಸೋತು, ಬೇಗನೆ ತಮ್ಮ ಕ್ಲಬ್‌ಗಳಿಗೆ ಆಡಬೇಕಾದ ಆಸೆ ಹೊತ್ತು ಅನೇಕ ಆಟಗಾರರು ಕಾಯುತ್ತಿರುತ್ತಾರೆ. ಆದರೆ, ಈ ಬಾರಿ ಇದ್ಯಾವ ಒತ್ತಡವೂ ಇರಲಿಲ್ಲ. ಅಂತರ ವಿ.ವಿ. ಮಟ್ಟದ ಟೂರ್ನಿಗಳು ನಡೆದಾಗ ಧಾರವಾಡ ವಲಯದಲ್ಲಿ ಯಾವ ಪ್ರಮುಖ ಟೂರ್ನಿಗಳು ಆಯೋಜನೆಯಾಗಿರಲಿಲ್ಲ. ಇದರಿಂದ ಆಟಗಾರರು ನಿರಾಳರಾಗಿ ಆಡಿದರು. ಬದಲಾಗಲಿ ಆಯ್ಕೆ ಪ್ರಕ್ರಿಯೆ ಅಂತರ ವಿ.ವಿ. ನಡುವಣ ಟೂರ್ನಿ ಮುಗಿದ ಬಳಿಕ ಧಾರವಾಡದಲ್ಲಿ ಅಂತರ ಕಾಲೇಜುಗಳ ನಡುವೆ ಟೂರ್ನಿ ಆರಂಭವಾಗುತ್ತದೆ! ಇದರಿಂದ ಪ್ರತಿ ವರ್ಷ ವೃತ್ತಿಪರ ಹೊಸ ಆಟಗಾರರು ಬರುವುದು ಕಡಿಮೆಯಾಗುತ್ತಿದೆ. ಬೇರೆ ಎಲ್ಲ ಕ್ರೀಡೆಯ ನಿಯಮಗಳಂತೆ ತಂಡಗಳ ಆಯ್ಕೆಯಲ್ಲಿಯೂ ವೃತ್ತಿಪರತೆ ತರಬೇಕು. ಪ್ರತಿ ವರ್ಷ ಮೊದಲು ವಿ.ವಿ. ವ್ಯಾಪ್ತಿಯ ಅಂತರ ಕಾಲೇಜುಗಳು ಟೂರ್ನಿ ನಡೆಸಬೇಕು. ಅಲ್ಲಿ ಉತ್ತಮ ಪ್ರದರ್ಶನ ನೀಡಿದ ಪ್ರತಿಭಾವಂತ ಆಟಗಾರರಿಗೆ ವಿಶ್ವವಿದ್ಯಾಲಯ ಪ್ರತಿನಿಧಿಸಲು ಅವಕಾಶ ಕೊಟ್ಟರೆ ಕರ್ನಾಟಕ ವಿ.ವಿ. ಕ್ರಿಕೆಟ್‌ ತಂಡ ಹೆಚ್ಚು ಬಲಿಷ್ಠವಾಗಲು ಸಾಧ್ಯವಾಗುತ್ತದೆ. ‘ನಮ್ಮ ವಿ.ವಿ. ತಂಡ ಮೂರ್ನಾಲ್ಕು ವರ್ಷಗಳ ಹಿಂದೆ ಮೊದಲ ‍ಪಂದ್ಯದಲ್ಲಿಯೇ ಸೋತು ಟೂರ್ನಿಯಿಂದ ಹೊರಬೀಳುತ್ತಿತ್ತು. ಆದರೆ, ಕಳೆದ ಎರಡು ವರ್ಷಗಳಿಂದ ಉತ್ತಮ ಪ್ರದರ್ಶನ ನೀಡುತ್ತಿದೆ. ಈ ಬಾರಿಯ ಟೂರ್ನಿಯ ಮೂರನೇ ಪಂದ್ಯದಲ್ಲಿ ಟಾಸ್‌ ಪ್ರಮುಖ ಪಾತ್ರ ವಹಿಸಿತು. ಇಲ್ಲವಾದರೆ ಮೈಸೂರು ವಿ.ವಿ. ತಂಡವನ್ನು ಮಣಿಸಲು ಅವಕಾಶವಿತ್ತು. ಹಿಂದಿನ ಟೂರ್ನಿಗಳಿಗಿಂತ ಈ ವರ್ಷದ ಪ್ರದರ್ಶನ ಖುಷಿ ನೀಡಿದೆ. ಟ್ರೋಫಿ ಗೆಲ್ಲುವ ಆಸೆ ಈಡೇರಬೇಕಾದರೆ ಅಭ್ಯಾಸದ ಅವಧಿಯಲ್ಲಿ ಒಂದಷ್ಟು ಮಾರ್ಪಾಡು ಮಾಡಿಕೊಳ್ಳುವ ಅಗತ್ಯವಿದೆ’ ಎನ್ನುತ್ತಾರೆ ಕರ್ನಾಟಕ ವಿ.ವಿ. ತಂಡದ ಕೋಚ್‌ ಬಾಹುಬಲಿ ಚೌಗುಲೆ. ಧಾರವಾಡದ ಕೆ.ಜಿ. ನಾಡಿಗೇರ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾರುವ ಬಾಹುಬಲಿ ಎರಡು ವರ್ಷಗಳಿಂದ ವಿ.ವಿ. ತಂಡದ ಆಯ್ಕೆ ಸಮಿತಿಯಲ್ಲಿಯೂ ಇದ್ದಾರೆ. ‘ಕರ್ನಾಟಕ ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ. ಡಿ.ಎಂ. ಪಾಟೀಲ್ ಸರ್‌ ಮಾರ್ಗದರ್ಶನದಿಂದ ಈ ಬಾರಿ ತಂಡ ಉತ್ತಮ ಪ್ರದರ್ಶನ ನೀಡಿದೆ. ಮುಂದಿನ ಟೂರ್ನಿಗಳಲ್ಲಿ ಇನ್ನಷ್ಟು ಚೆನ್ನಾಗಿ ಆಡಲು ಹಿಂದಿನ ಅನುಭವ ನೆರವಾಗುತ್ತದೆ’ ಎನ್ನುತ್ತಾರೆ ಬಾಹುಬಲಿ. ಕರ್ನಾಟಕ ವಿ.ವಿ. ತಂಡದ ನಾಯಕರಾಗಿದ್ದ ಸುಮೇದ್ ಹಲಸಗಿ ‘ಈ ಬಾರಿ ಒತ್ತಡವಿಲ್ಲದೇ ಆಡಿದೆವು. ಆದ್ದರಿಂದ ಪ್ರಶಸ್ತಿ ಗೆಲ್ಲುವ ನಿರೀಕ್ಷೆ ಹೆಚ್ಚಿತ್ತು. ಆಟಗಾರರ ನಡುವೆ ಹೊಂದಾಣಿಕೆಯೂ ಚೆನ್ನಾಗಿತ್ತು. ಪ್ರತಿ ವರ್ಷ ಅಂತರ ವಿ.ವಿ. ಟೂರ್ನಿ ಆರಂಭವಾಗುವ ಒಂದು ತಿಂಗಳ ಮೊದಲೇ ಶಿಬಿರ ನಡೆದರೆ ಆಟಗಾರರ ನಡುವೆ ಇನ್ನಷ್ಟು ಹೊಂದಾಣಿಕೆ ಬರಲು ಸಾಧ್ಯವಾಗುತ್ತದೆ. ಯೋಜನೆಗಳನ್ನು ಹಣೆಯಲು ಅನುಕೂಲವಾಗುತ್ತದೆ’ ಎಂದರು. ‘ವಿ‌.ವಿ. ತಂಡದಲ್ಲಿ ಪ್ರತಿ ವರ್ಷ ಆಟಗಾರರು ಬದಲಾಗುತ್ತಲೇ ಇರುತ್ತಾರೆ. ಆದ್ದರಿಂದ ಇರುವ ಆಟಗಾರರ ಜೊತೆ ಹೊಂದಿಕೊಂಡು ಆಡಬೇಕಾಗುತ್ತದೆ. ಆದ್ದರಿಂದ ತರಬೇತಿ ಶಿಬಿರದ ಅವಧಿ ಹೆಚ್ಚಿಸಬೇಕು’ ಎಂದು ಅಭಿಪ್ರಾಯಪಟ್ಟರು. ಸುಮೇದ್‌ ಹಲಸಗಿ, ಹರ್ಷಾ ಚಂದಾವರ್ಕರ್, ಅಕ್ಷಯ ಹಿರೇಮಠ, ಸಾಗರ ಮುರಗೋಡ್‌, ಸುಧನ್ವ ಕುಲಕರ್ಣಿ, ರೋಷನ್‌ ಜವಳಿ, ಅರುಣ ಸಾಧನ್ನವರ, ಶೋಯೆಬ್‌ ಕಿತ್ತೂರು, ಶುಭಮ್‌ ಗೋಂಡ್ಕರ್‌, ವಿಕಾಸ ದೊಡ್ಡಮನಿ, ಪುನೀತ್‌ ದೀಕ್ಷಿತ್‌, ಪಿ.ಎಲ್‌. ಕೌಸ್ತುಬ್‌, ಪರೀಕ್ಷಿತ್‌ ಒಕ್ಕುಂದ, ಎಲ್. ವಿನಯ್‌, ಸಚಿನ್‌ ರಜಪೂತ್‌ ಮತ್ತು ಇಂದ್ರಸೇನ ದಾನಿ ಈ ಬಾರಿ ಕರ್ನಾಟಕ ವಿ.ವಿ. ತಂಡವನ್ನು ಪ್ರತಿನಿಧಿಸಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.