ಆರ್ಚರಿ: ಅತನುಗೆ ಕಂಚು ಬ್ಯಾಂಕಾಕ್‌ (ಪಿಟಿಐ): ‘ಶೂಟ್‌ ಆಫ್‌’ನಲ್ಲಿ ಮಿಂಚಿದ ಭಾರತದ ಆರ್ಚರಿ ಪಟು ಅತನು ದಾಸ್‌, ಏಷ್ಯನ್‌ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. ಮಂಗಳವಾರ ನಡೆದ ಪುರುಷರ ವೈಯಕ್ತಿಕ ವಿಭಾಗದ ರಿಕರ್ವ್‌ ಸ್ಪರ್ಧೆಯಲ್ಲಿ ಅವರಿಂದ ಈ ಸಾಧನೆ ಮೂಡಿಬಂದಿದೆ. ಕಂಚಿನ ಪದಕದ ಪೈಪೋಟಿಯ ‘ಶೂಟ್‌ ಆಫ್‌’ನಲ್ಲಿ ಅತನು 6–5ಯಿಂದ ದಕ್ಷಿಣ ಕೊರಿಯಾದ ಜಿನ್‌ ಹಯೆಕ್‌ ಒಹ್‌ ಅವರನ್ನು ಪರಾಭವಗೊಳಿಸಿದರು. ಈ ಬಾರಿಯ ಚಾಂಪಿಯನ್‌ಷಿಪ್‌ನಲ್ಲಿ ಅತನು ಗೆದ್ದ ಎರಡನೇ ಪದಕ ಇದಾಗಿದೆ. ಸೋಮವಾರ ನಡೆದಿದ್ದ ಮಿಶ್ರ ತಂಡ ವಿಭಾಗದ ರಿಕರ್ವ್‌ ಸ್ಪರ್ಧೆಯಲ್ಲಿ ಅತನು ಮತ್ತು ದೀಪಿಕಾ ಕುಮಾರಿ ಜೋಡಿ ಕಂಚಿನ ಪದಕ ಪಡೆದಿತ್ತು. ಅಭಿಷೇಕ್‌ ವರ್ಮಾ ಮತ್ತು ಜ್ಯೋತಿ ಸುರೇಖಾ ವೆನ್ನಾಂ ಅವರು ಮಿಶ್ರ ತಂಡ ವಿಭಾಗದ ಕಾಂಪೌಂಡ್‌ ಸ್ಪರ್ಧೆಯಲ್ಲಿ ಫೈನಲ್‌ ಪ್ರವೇಶಿಸಿದ್ದು, ಬುಧವಾರ ಚೀನಾ ತೈಪೆಯ ಜೋಡಿಯೊಂದಿಗೆ ಸೆಣಸಲಿದ್ದಾರೆ. ಭಾರತ ಆರ್ಚರಿ ಸಂಸ್ಥೆಯನ್ನು ಅಮಾನತಿನಲ್ಲಿಟ್ಟಿರುವ ಕಾರಣ ಭಾರತದ ಸ್ಪರ್ಧಿಗಳು ಈ ಚಾಂಪಿಯನ್‌ಷಿಪ್‌ನಲ್ಲಿ ವಿಶ್ವ ಆರ್ಚರಿ ಫೆಡರೇಷನ್‌ನ ಧ್ವಜದಡಿ ಪಾಲ್ಗೊಂಡಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.