ಸತತ ನಾಲ್ಕನೇ ಪ್ರಶಸ್ತಿ ಗೆದ್ದ ವನಿತೆಯರು ಬೆಂಗಳೂರು: ಅಪೂರ್ವ ಆಟ ಆಡಿದ ಕರ್ನಾಟಕದ ಮಹಿಳಾ ತಂಡದವರು ‘ಫೈವ್‌ ಎಸ್‌’ ಸ್ಪೋರ್ಟ್ಸ್‌ ಆ್ಯಂಡ್‌ ಕಲ್ಚರಲ್‌ ಅಕಾಡೆಮಿ ಮತ್ತು ಯುರೋ ಕಿಡ್ಸ್‌ ಸಹಯೋಗದಲ್ಲಿ ನಡೆದ ರಾಷ್ಟ್ರೀಯ ಸೀನಿಯರ್‌ ಬಾಲ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನಲ್ಲಿ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಇದರೊಂದಿಗೆ ಚಾಂಪಿಯನ್‌ಷಿಪ್‌ನಲ್ಲಿ ಸತತ ನಾಲ್ಕನೇ ಪ್ರಶಸ್ತಿ ಗೆದ್ದ ಸಾಧನೆ ಮಾಡಿದ್ದಾರೆ. ಜೆ.ಪಿ.ನಗರದ ಏಳನೇ ಹಂತದಲ್ಲಿರುವ ಆರ್‌.ಬಿ.ಐ.ಬಡಾವಣೆಯ ಮೈದಾನದಲ್ಲಿ ಭಾನುವಾರ ನಡೆದ ಫೈನಲ್‌ನಲ್ಲಿ ಕರ್ನಾಟಕದ ವನಿತೆಯರು 35–9, 32–35, 35–21ರಲ್ಲಿ ತಮಿಳುನಾಡು ತಂಡವನ್ನು ಸೋಲಿಸಿದರು. ಮೊದಲ ಸೆಟ್‌ನಲ್ಲಿ ಅಮೋಘ ಆಟ ಆಡಿದ ಜಯಲಕ್ಷ್ಮಿ ಬಳಗ ನಂತರ ನಿರಾಸೆ ಕಂಡಿತು. ನಿರ್ಣಾಯಕ ಎನಿಸಿದ್ದ ಮೂರನೇ ಸೆಟ್‌ನ ಆರಂಭದಲ್ಲಿ ಜಿದ್ದಾಜಿದ್ದಿನ ಪೈಪೋಟಿ ಕಂಡುಬಂತು. ನಂತರ ದಿಟ್ಟ ಆಟ ಆಡಿದ ಜಯಲಕ್ಷ್ಮಿ ಮತ್ತು ಚಂದನ ಆತಿಥೇಯರ ಸಂಭ್ರಮಕ್ಕೆ ಕಾರಣರಾದರು. ಮೂರನೇ ಸ್ಥಾನಕ್ಕಾಗಿ ನಡೆದ ಪೈಪೋಟಿಯಲ್ಲಿ ಕೇರಳ 2–0 ಸೆಟ್‌ಗಳಿಂದ ಆಂಧ್ರ ಪ್ರದೇಶ ತಂಡವನ್ನು ಸೋಲಿಸಿತು. ಜಯಲಕ್ಷ್ಮಿ ‘ಟೂರ್ನಿಯ ಶ್ರೇಷ್ಠ ಆಟಗಾರ್ತಿ’ ಮತ್ತು ‘ಸ್ಟಾರ್‌ ಆಫ್‌ ಇಂಡಿಯಾ’ ಪ್ರಶಸ್ತಿ ಪಡೆದರು. ಚಂದನ ಕೂಡಾ ‘ಸ್ಟಾರ್‌ ಆಫ್‌ ಇಂಡಿಯಾ’ ಪ್ರಶಸ್ತಿಗೆ ಭಾಜನರಾದರು. ಮೂಡುಬಿದಿರೆ ಆಳ್ವಾಸ್‌ ಶಿಕ್ಷಣ ಸಂಸ್ಥೆಯ ಏಳು ಮಂದಿ ಆಟಗಾರ್ತಿಯರು ರಾಜ್ಯ ತಂಡದಲ್ಲಿ ಆಡಿದ್ದರು. ರಾಜ್ಯಕ್ಕೆ ಮೂರನೇ ಸ್ಥಾನ: ಪುರುಷರ ವಿಭಾಗದಲ್ಲಿ ಕರ್ನಾಟಕ ತಂಡ ಕಂಚಿನ ಪದಕ ಜಯಿಸಿತು. ತಂಡವು ಸತತ ನಾಲ್ಕನೇ ಬಾರಿ ಈ ಸಾಧನೆ ಮಾಡಿತು. ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಕರ್ನಾಟಕ 2–1 ಸೆಟ್‌ಗಳಿಂದ ತೆಲಂಗಾಣವನ್ನು ಮಣಿಸಿತು. ಫೈನಲ್‌ನಲ್ಲಿ ಭಾರತೀಯ ರೈಲ್ವೆ 35–33, 34–36, 35–33ರಲ್ಲಿ ತಮಿಳುನಾಡು ತಂಡವನ್ನು ಮಣಿಸಿ ಪ್ರಶಸ್ತಿಗೆ ಮುತ್ತಿಕ್ಕಿತು. ಕರ್ನಾಟಕ ತಂಡದ ಉಲ್ಲಾಸ್‌ ‘ಸ್ಟಾರ್‌ ಆಫ್‌ ಇಂಡಿಯಾ’ ಗೌರವ ಪಡೆದರು. ವಿಜೇತ ತಂಡದ ಎಲ್ಲಾ ಸದಸ್ಯರಿಗೆ ತಲಾ ಎರಡು ಗ್ರಾಂ ಚಿನ್ನದ ಪದಕ ನೀಡಲಾಯಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.