ಮರುಕಳಿಸುತ್ತಿದೆ ವೈಭವ ಶ ತಮಾನಗಳ ಇತಿಹಾಸವಿರುವ ಬಾಲ್‌ ಬ್ಯಾಡ್ಮಿಂಟನ್‌ ಕ್ರೀಡೆಯಲ್ಲಿ ಕರ್ನಾಟಕ ವಿಶಿಷ್ಠ ಛಾಪು ಒತ್ತಿದೆ. ಈ ಕ್ರೀಡೆಯ ಚರಿತ್ರೆಯ ಪುಟಗಳನ್ನು ತಿರುವಿ ಹಾಕಿದರೆ ಅಲ್ಲಿ ರಾಜ್ಯ ತಂಡದ ಪ್ರಾಬಲ್ಯ ಎದ್ದು ಕಾಣುತ್ತದೆ. 1956ರಿಂದ 1992ರ ಅವಧಿಯಲ್ಲಿ ನಡೆದ 41 ರಾಷ್ಟ್ರೀಯ ಸೀನಿಯರ್‌ ಚಾಂಪಿಯನ್‌ಷಿಪ್‌ಗಳ ಪೈಕಿ ಮಹಿಳಾ ತಂಡದವರು ಸತತ 33ರಲ್ಲಿ ಪ್ರಶಸ್ತಿ ಜಯಿಸಿ ದಾಖಲೆ ನಿರ್ಮಿಸಿದ್ದಾರೆ. ಪುರುಷರ ತಂಡದವರೂ ಅಚ್ಚಳಿಯದ ಹೆಜ್ಜೆ ಗುರುತು ಮೂಡಿಸಿದ್ದಾರೆ. ಮೂರು ಸಲ ಚಾಂಪಿಯನ್‌ ಆಗಿರುವ ಕರ್ನಾಟಕ ತಂಡ ಹಿಂದಿನ ಮೂರು ಚಾಂಪಿಯನ್‌ಷಿಪ್‌ಗಳಲ್ಲಿ ಕಂಚಿನ ಪದಕಗಳಿಗೆ ಕೊರಳೊಡ್ಡಿದೆ. ಕ್ರಿಕೆಟಿಗರು, ಟೆನಿಸ್‌ ಮತ್ತು ಬ್ಯಾಡ್ಮಿಂಟನ್‌ ಸ್ಪರ್ಧಿಗಳ ಪ್ರಾಬಲ್ಯದ ನಡುವೆಯೂ ಕರ್ನಾಟಕದ ಬಾಲ್‌ ಬ್ಯಾಡ್ಮಿಂಟನ್‌ ಆಟಗಾರ್ತಿ ಜಯಮ್ಮ ಶ್ರೀನಿವಾಸನ್‌ ಪ್ರತಿಷ್ಠಿತ ಅರ್ಜುನ ಪ್ರಶಸ್ತಿ ಗೆದ್ದ ಸಾಧನೆ ಮಾಡಿದ್ದಾರೆ. 1972ರಲ್ಲಿ ಅವರಿಗೆ ಈ ಗೌರವ ಒಲಿದಿತ್ತು. ಏಕಲವ್ಯ ಪ್ರಶಸ್ತಿ ಪುರಸ್ಕೃತರ ಪಟ್ಟಿಯ ಮೇಲೆ ಬೆಳಕು ಚೆಲ್ಲಿದರೆ ಮಹಮ್ಮದ್‌ ಇಲಿಯಾಸ್‌, ಶಾಂತಲಾ, ಆಶಾ, ವಿ.ಧ್ರುವ, ಜಿ.ಬಿ.ನಾಗರಾಜ್‌, ಎಂ.ಎಸ್‌.ಪುಟ್ಟರಾಜು, ಶ್ರೀನಿವಾಸರಾಜ ಅರಸ್‌, ಮಹದೇವ ಗೌಡ, ಚಂದ್ರಶೇಖರ್‌, ಬಿ.ಸುದರ್ಶನ್‌ ಮತ್ತು ಕೆ.ಮಹದೇವ ಅವರ ಹೆಸರು ಎದ್ದು ಕಾಣುತ್ತದೆ. ಎ.ಆರ್‌.ಶ್ರುತಿ, ಎಂ.ಆರ್‌.ಕಾವ್ಯಾ, ಎಂ.ಪಿ.ರಂಜಿತಾ, ಕೆ.ಜಿ.ಯಶಸ್ವಿನಿ, ಎಂ.ಎಸ್‌.ದಿವ್ಯಾ, ಆರ್‌.ಮಂಜುಳಾ ಮತ್ತು ಜಯಲಕ್ಷ್ಮಿ ಅವರು ಈ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ರಾಜ್ಯ ತಂಡ 2016ರಿಂದ 2018ರ ಅವಧಿಯಲ್ಲಿ ನಡೆದ ರಾಷ್ಟ್ರೀಯ ಚಾಂಪಿಯನ್‌ಷಿಪ್‌ ಮತ್ತು ಫೆಡರೇಷನ್‌ ಕಪ್‌ನಲ್ಲಿ ‍ಟ್ರೋಫಿ ಜಯಿಸಿ ‘ಹ್ಯಾಟ್ರಿಕ್‌’ ಸಾಧನೆ ಮಾಡಿರುವುದು ಇದಕ್ಕೆ ಸಾಕ್ಷಿ. ಕೆಬಿಬಿಎಯ ಪ್ರಯತ್ನದ ಫಲ ಕರ್ನಾಟಕ ಬಾಲ್‌ ಬ್ಯಾಡ್ಮಿಂಟನ್‌ ಸಂಸ್ಥೆ (ಕೆಬಿಬಿಎ) ಈ ಕ್ರೀಡೆಯ ಅಭಿವೃದ್ಧಿಗೆ ಅವಿರತವಾಗಿ ಶ್ರಮಿಸುತ್ತಿದೆ. ದಕ್ಷಿಣ ಕರ್ನಾಟಕಕ್ಕೆ ಸೀಮಿತವಾಗಿರುವ ಈ ಕ್ರೀಡೆಯ ಕಂಪನ್ನು ಉತ್ತರ ಕರ್ನಾಟಕಕ್ಕೂ ಪಸರಿಸುವ ಕೆಲಸ ಮಾಡುತ್ತಿದೆ. ಈ ಉದ್ದೇಶದಿಂದ ಆ ಭಾಗದ ಎಲ್ಲಾ ಜಿಲ್ಲೆಗಳಿಗೂ ನುರಿತ ಕೋಚ್‌ಗಳನ್ನು ಕಳುಹಿಸಿ ಅಲ್ಲಿನ ಮಕ್ಕಳಿಗೆ ಬಾಲ್‌ ಬ್ಯಾಡ್ಮಿಂಟನ್‌ ಆಟದ ಪಾಠಗಳನ್ನು ಹೇಳಿಕೊಡುವ, ಆ ಮೂಲಕ ಅವರಲ್ಲಿ ಆಸಕ್ತಿ ಚಿಗುರೊಡೆಯುವಂತೆ ಮಾಡುವ ಕೆಲಸಕ್ಕೆ ಕೈ ಹಾಕಿದೆ. ಇಷ್ಟೇ ಅಲ್ಲದೆ, ರಾಜ್ಯ ಸಬ್‌ ಜೂನಿಯರ್‌, ಜೂನಿಯರ್‌ ಮತ್ತು ಸೀನಿಯರ್‌ ಟೂರ್ನಿಗಳನ್ನು ನಡೆಸಿ ಪ್ರತಿಭೆಗಳನ್ನು ಹೆಕ್ಕಿ ತೆಗೆಯುವ ಕಾರ್ಯಕ್ಕೆ ಮುಂದಾಗಿದೆ. ಈ ಕುರಿತು ‘ಪ್ರಜಾವಾಣಿ’ ಜೊತೆ ಮಾತನಾಡಿದ ಕೆಬಿಬಿಎ ಕಾರ್ಯದರ್ಶಿ ದಿನೇಶ್‌ ‘ಹಿಂದೆಲ್ಲಾ ಈ ಕ್ರೀಡೆಯಲ್ಲಿ ವಯಸ್ಕರೇ ಹೆಚ್ಚಾಗಿ ತೊಡಗಿಕೊಳ್ಳುತ್ತಿದ್ದರು. ಯುವ ಸಮುದಾಯದ ಪಾಲ್ಗೊಳ್ಳುವಿಕೆಯಿಂದ ಮಾತ್ರ ಕ್ರೀಡೆಯ ಅಭಿವೃದ್ಧಿ ಸಾಧ್ಯ ಎಂಬುದು ನಮ್ಮ ನಂಬಿಕೆ. ಹೀಗಾಗಿ ಯುವಕರನ್ನು ಈ ಆಟದತ್ತ ಸೆಳೆದು ಅವರಲ್ಲಿ ಹೊಸ ಕನಸು ಬಿತ್ತುವ ಕೆಲಸಕ್ಕೆ ಮುಂದಾಗಿದ್ದೇವೆ. ಇದಕ್ಕಾಗಿ ಹೊಸ ಯೋಜನೆಗಳನ್ನು ರೂಪಿಸಿ ಅವುಗಳನ್ನು ಕಾರ್ಯಗತಗೊಳಿಸಲು ಶ್ರಮಿಸುತ್ತಿದ್ದೇವೆ. ಹೀಗಾಗಿ ತಂಡದ ಸಾಮರ್ಥ್ಯ ಹೆಚ್ಚುತ್ತಿದೆ’ ಎಂದರು. ‘ಬಾಲ್‌ ಬ್ಯಾಡ್ಮಿಂಟನ್‌ನಲ್ಲಿ ತೊಡಗಿಕೊಳ್ಳುವವರಿಗೆ ಉದ್ಯೋಗವಕಾಶ ಕಡಿಮೆ. ಕೆಲಸ ಸಿಗುವುದಿಲ್ಲ ಎಂಬ ಕಾರಣದಿಂದ ಅನೇಕರು ಈ ಕ್ರೀಡೆಯಿಂದ ವಿಮುಖರಾಗಿದ್ದಾರೆ. ಇದನ್ನು ತಪ್ಪಿಸುವ ಸಲುವಾಗಿ ಜಿಂದಾಲ್‌ ಮತ್ತು ಕೆನರಾ ಬ್ಯಾಂಕ್‌ ತಂಡಗಳಿಗೆ ವಿಶೇಷ ಮಾನ್ಯತೆ ನೀಡಿದ್ದೇವೆ. ಈ ಎರಡೂ ತಂಡಗಳು ಈ ಬಾರಿಯ ರಾಷ್ಟ್ರೀಯ ಸೀನಿಯರ್‌ ಚಾಂಪಿಯನ್‌ಷಿಪ್‌ನಲ್ಲಿ ಆಡಿವೆ. ಈ ಸಂಸ್ಥೆಗಳಲ್ಲಿ ಈಗಾಗಲೇ ರಾಜ್ಯದ ಏಳು ಮಂದಿಗೆ ಕೆಲಸ ಸಿಕ್ಕಿದೆ. ಇದರಿಂದ ಪ್ರೇರಣೆಗೊಂಡು ಇನ್ನಷ್ಟು ಮಂದಿ ಈ ಆಟವನ್ನು ವೃತ್ತಿಪರವಾಗಿ ಸ್ವೀಕರಿಸಲು ಮುಂದೆ ಬರುತ್ತಾರೆ ಎಂಬ ನಂಬಿಕೆ ಇದೆ. ಈ ತಂಡಗಳ ಭಾಗವಹಿಸುವಿಕೆಯಿಂದ ಪ್ರತಿಭಾನ್ವೇಷಣೆಯೂ ಸುಲಭವಾಗಲಿದೆ’ ಎಂದೂ ದಿನೇಶ್‌ ಹೇಳುತ್ತಾರೆ. ‘ಮೊದಲೆಲ್ಲಾ ಜಿಲ್ಲೆಯೊಂದರಲ್ಲಿ ಎಂಟರಿಂದ ಹತ್ತು ಬಾಲ್‌ ಬ್ಯಾಡ್ಮಿಂಟನ್‌ ತಂಡಗಳಿರುತ್ತಿದ್ದವು. ಹೀಗಾಗಿ ರಾಜ್ಯದ ಶಕ್ತಿಯೂ ಹೆಚ್ಚಿತ್ತು. ಆದರೆ ಈಗ ಇಡೀ ರಾಜ್ಯ ಹುಡುಕಿದರೂ ಬಲಿಷ್ಠ ಎನಿಸಿದ ಹತ್ತು ತಂಡ ಸಿಗುವುದೂ ಕಷ್ಟ’ ಎಂದು ಬೇಸರ ವ್ಯಕ್ತಪಡಿಸಿದರು. ಚಾಂಪಿಯನ್‌ಷಿಪ್‌ಗಳ ಆಯೋಜನೆ ಯುವಕರನ್ನು ಸೆಳೆಯುವ ಸಲುವಾಗಿ ಕೆಬಿಬಿಎ ಕರ್ನಾಟಕದಲ್ಲಿ ಆದಷ್ಟು ಹೆಚ್ಚು ರಾಷ್ಟ್ರೀಯ ಚಾಂಪಿಯನ್‌ಷಿಪ್‌, ಫೆಡರೇಷನ್ ಕಪ್‌ ಮತ್ತು ದಕ್ಷಿಣ ವಲಯ ಟೂರ್ನಿಗಳನ್ನು ನಡೆಸಲು ಆದ್ಯತೆ ನೀಡುತ್ತಿದೆ. 2017ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯ ಆಳ್ವಾಸ್‌ ಶಿಕ್ಷಣ ಸಂಸ್ಥೆಯ ಮೈದಾನದಲ್ಲಿ ರಾಷ್ಟ್ರೀಯ ಚಾಂಪಿಯನ್‌ಷಿಪ್‌ ಆಯೋಜನೆಯಾಗಿತ್ತು. ಅದಕ್ಕೂ ಮುನ್ನ ಚನ್ನರಾಯಪಟ್ಟಣದಲ್ಲಿ ಚಾಂಪಿಯನ್‌ಷಿಪ್‌ ನಡೆದಿತ್ತು. ಮೂಡುಬಿದಿರೆಯಲ್ಲಿ ರಾಜ್ಯ ಮಹಿಳಾ ತಂಡ ಚಾಂಪಿಯನ್‌ ಆಗಿತ್ತು. ಈ ಬಾರಿ ‘ಫೈವ್‌ ಎಸ್‌’ ಸ್ಪೋರ್ಟ್ಸ್‌ ಆ್ಯಂಡ್‌ ಕಲ್ಚರಲ್‌ ಅಸೋಸಿಯೇಷನ್‌ ಮತ್ತು ಬೆಂಗಳೂರು ಜಿಲ್ಲಾ ಬಾಲ್‌ ಬ್ಯಾಡ್ಮಿಂಟನ್‌ ಸಂಸ್ಥೆಯ ಸಹಯೋಗದಲ್ಲಿ ಜೆ.ಪಿ.ನಗರದ ಏಳನೇ ಹಂತದಲ್ಲಿರುವ ಆರ್‌.ಬಿ.ಐ ಬಡಾವಣೆಯ ಮೈದಾನದಲ್ಲಿ ಚಾಂಪಿಯನ್‌ಷಿಪ್ ಆಯೋಜಿಸಲಾಗಿತ್ತು. ರಾಷ್ಟ್ರೀಯ ಚಾಂಪಿಯನ್‌ಷಿಪ್‌ನ ಇತಿಹಾಸದಲ್ಲಿ ಮೊದಲ ಬಾರಿಗೆ ಟರ್ಫ್‌ ಅಂಗಳದಲ್ಲಿ ಪಂದ್ಯಗಳನ್ನು ನಡೆಸಿದ ಕೆಬಿಬಿಎ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಪಂದ್ಯಗಳನ್ನು ವೀಕ್ಷಿಸಲು ಕ್ರೀಡಾಂಗಣಕ್ಕೆ ಬರುವ ಅಭಿಮಾನಿಗಳಿಗೆ ಉಚಿತವಾಗಿ ಟೀ ಷರ್ಟ್‌ ಮತ್ತು ಕ್ಯಾಪ್‌ ನೀಡಿತ್ತು. ವಿಜೇತ ತಂಡಗಳಿಗೆ ಆಕರ್ಷಕ ಬಹುಮಾನಗಳನ್ನು ನೀಡಿದ್ದೂ ಪ್ರಶಂಸೆಗೆ ಕಾರಣವಾಯಿತು. ‘ರಾಷ್ಟ್ರೀಯ ಚಾಂಪಿಯನ್‌ಷಿಪ್‌ಗಳಲ್ಲಿ ದೇಶದ ಎಲ್ಲಾ ಭಾಗಗಳ ಬಲಿಷ್ಠ ತಂಡಗಳು ಭಾಗವಹಿಸುತ್ತವೆ. ಹೀಗಾಗಿ ಶಾಲಾ ಮತ್ತು ಕಾಲೇಜು ಮಕ್ಕಳಿಗೆ ಜಯಲಕ್ಷ್ಮಿ, ಮಹದೇವಸ್ವಾಮಿ, ಉಲ್ಲಾಸ್ ಅವರಂತಹ ಪ್ರತಿಭಾನ್ವಿತರ ಆಟವನ್ನು ಹತ್ತಿರದಿಂದ ನೋಡುವ ಅವಕಾಶ ಸಿಗುತ್ತದೆ. ಹಾಗೇ ಪಂದ್ಯಗಳನ್ನು ವೀಕ್ಷಿಸುವಾಗ ಅವರಲ್ಲೂ ಈ ಕ್ರೀಡೆಯಲ್ಲಿ ಎತ್ತರದ ಸಾಧನೆ ಮಾಡುವ ಕನಸು ಚಿಗುರೊಡೆಯಬಹುದು. ಈ ಕಾರಣದಿಂದ ಹೆಚ್ಚೆಚ್ಚು ರಾಷ್ಟ್ರೀಯ ಟೂರ್ನಿಗಳನ್ನು ನಡೆಸಲು ತೀರ್ಮಾನಿಸಿದ್ದೇವೆ’ ಎಂದು ದಿನೇಶ್‌ ನುಡಿಯುತ್ತಾರೆ. ಮೋಹನ ಆಳ್ವ ಅವರ ಬೆಂಬಲ ಕರ್ನಾಟಕದಲ್ಲಿ ಅಳಿವಿನ ಅಂಚಿಗೆ ಸಾಗುತ್ತಿದ್ದ ಬಾಲ್ ಬ್ಯಾಡ್ಮಿಂಟನ್‌ ಕ್ರೀಡೆಗೆ ಹೊಸ ಮೆರುಗು ನೀಡಿದವರು ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಎಂ. ಮೋಹನ ಆಳ್ವ. ಆಂತರಿಕ ಕಚ್ಚಾಟದಿಂದ 90ರ ದಶಕದಲ್ಲಿ ಕರ್ನಾಟಕ ಬಾಲ್‌ ಬ್ಯಾಡ್ಮಿಂಟನ್‌ ಸಂಸ್ಥೆ ಎರಡು ಹೋಳಾಗಿತ್ತು. ಹೀಗೆ ಇಬ್ಭಾಗವಾದ ಸಂಸ್ಥೆಗಳಿಗೆ ಭಾರತ ಬಾಲ್ ಬ್ಯಾಡ್ಮಿಂಟನ್‌ ಫೆಡರೇಷನ್‌ (ಬಿಬಿಎಫ್‌ಐ) ಮಾನ್ಯತೆ ನೀಡಲು ನಿರಾಕರಿಸಿತ್ತು. ಹೀಗಾಗಿ 1992 ರಿಂದ 2003ರ ಅವಧಿಯಲ್ಲಿ ಕರ್ನಾಟಕದ ಪ್ರಾಬಲ್ಯ ಕುಸಿದಿತ್ತು. ಗ್ರಾಮೀಣ ಮತ್ತು ದೇಶಿ ಕ್ರೀಡೆ ಎಂದೇ ಹೆಸರಾಗಿದ್ದ ಬಾಲ್‌ ಬ್ಯಾಡ್ಮಿಂಟನ್‌ಗೆ ಮರು ಜೀವ ನೀಡಲು ನಿರ್ಧರಿಸಿದ ಆಳ್ವ ಅವರು ರಾಜ್ಯದ ಎಲ್ಲಾ ಭಾಗಗಳಿಂದಲೂ ಪ್ರತಿಭಾನ್ವಿತ ಕ್ರೀಡಾಪಟುಗಳನ್ನು ಹೆಕ್ಕಿ ಅವರಿಗೆ ಪ್ರೌಢಶಾಲಾ ಹಂತದಿಂದ ಸ್ನಾತಕೋತ್ತರ ಪದವಿಯವರೆಗೆ ಉಚಿತ ಊಟ, ವಸತಿ ಮತ್ತು ಶಿಕ್ಷಣ ನೀಡುವ ವ್ಯವಸ್ಥೆ ಮಾಡಿದರು. ಬಾಲ್ ಬ್ಯಾಡ್ಮಿಂಟನ್‌ನಲ್ಲಿ ಆಸಕ್ತಿ ಹೊಂದಿರುವ 55 ಮಂದಿ ಮಕ್ಕಳಿಗೆ ನುರಿತ ಕೋಚ್‌ಗಳಿಂದ ತರಬೇತಿ ನೀಡುವ ವ್ಯವಸ್ಥೆ ಮಾಡಿದ್ದಾರೆ. ಆಳ್ವಾಸ್‌ ಸಂಸ್ಥೆಯಲ್ಲಿ ತರಬೇತಿ ಪಡೆದ ಆರರಿಂದ ಏಳು ಮಂದಿ ಆಟಗಾರರು ರಾಜ್ಯದ ಮಹಿಳಾ ಮತ್ತು ಪುರುಷರ ತಂಡದಲ್ಲಿ ಆಡುತ್ತಿರುವುದು ಇದಕ್ಕೆ ಸಾಕ್ಷಿ. ಆಳ್ವಾಸ್‌ನ ಸ್ಪರ್ಧಿಗಳೇ ಹೆಚ್ಚಿರುವ ಮಂಗಳೂರು ವಿಶ್ವವಿದ್ಯಾಲಯ 2004ರಿಂದ ಸತತವಾಗಿ 15 ವರ್ಷ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಟೂರ್ನಿಯಲ್ಲಿ ಲೀಗ್‌ ಹಂತಕ್ಕೇರಿ ದಾಖಲೆ ನಿರ್ಮಿಸಿದೆ. ಈ ಪೈಕಿ ಮಹಿಳೆಯರು ಎಂಟು ವರ್ಷ ಮತ್ತು ಪುರುಷರು ಎರಡು ವರ್ಷ ಚಾಂ‍ಪಿಯನ್‌ ಆಗಿದ್ದಾರೆ. ಬಾಲ್ ಬ್ಯಾಡ್ಮಿಂಟನ್‌ ಅಭಿವೃದ್ಧಿಗೆ ಆಳ್ವಅವರು ನೀಡುತ್ತಿರುವ ಬೆಂಬಲ, ಸಹಕಾರವನ್ನು ದಿನೇಶ್‌ ಅವರೂ ಸ್ಮರಿಸುತ್ತಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.