ಸ್ಟ್ರಾಂಜಾ ಸ್ಮಾರಕ ಬಾಕ್ಸಿಂಗ್‌ ಟೂರ್ನಿ: ಫೈನಲ್‌ಗೆ ಮಂಜು, ಮೀನಾ, ಜರೀನಾ ನವದೆಹಲಿ: ಭಾರತದ ಮಂಜು ರಾಣಿ, ಮೀನಾ ಕುಮಾರಿ ದೇವಿ ಮತ್ತು ನಿಖತ್‌ ಜರೀನಾ ಅವರು ಬಲ್ಗೇರಿಯಾದ ಸೋಫಿಯಾದಲ್ಲಿ ನಡೆಯುತ್ತಿರುವ ಸ್ಟ್ರಾಂಜಾ ಸ್ಮಾರಕ ಬಾಕ್ಸಿಂಗ್‌ ಟೂರ್ನಿಯಲ್ಲಿ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ. ಸೋಮವಾರ ನಡೆದ ಮಹಿಳೆಯರ 51 ಕೆ.ಜಿ. ವಿಭಾಗದ ಸೆಮಿಫೈನಲ್‌ನಲ್ಲಿ ವಿಶ್ವ ಜೂನಿಯರ್‌ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಗೆದ್ದ ಸಾಧನೆ ಮಾಡಿರುವ ಜರೀನಾ 3–2 ಪಾಯಿಂಟ್ಸ್‌ನಿಂದ ಪೋಲೆಂಡ್‌ನ ಸಾಂಡ್ರಾ ಡ್ರಾಬಿಕ್‌ ಅವರನ್ನು ಪರಾಭವಗೊಳಿಸಿದರು. ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಎರಡು ಚಿನ್ನದ ಪದಕಗಳನ್ನು ಗೆದ್ದಿರುವ ಜರೀನಾ ಚುರುಕಿನ ಪಾದ ಚಲನೆ ಮತ್ತು ಬಲಿಷ್ಠ ಪಂಚ್‌ಗಳ ಮೂಲಕ ಎದುರಾಳಿಯನ್ನು ತಬ್ಬಿಬ್ಬುಗೊಳಿಸಿದರು. 48 ಕೆ.ಜಿ. ವಿಭಾಗದಲ್ಲಿ ಕಣದಲ್ಲಿದ್ದ ಮಂಜು ರಾಣಿ ನಾಲ್ಕರ ಘಟ್ಟದ ಪೈಪೋಟಿಯಲ್ಲಿ ಬಲ್ಗೇರಿಯಾದ ಎಮಿ ಮರಿ ಟೊಡೊರೋವಾ ಅವರನ್ನು ಮಣಿಸಿದರು. 54 ಕೆ.ಜಿ. ವಿಭಾಗದ ಸೆಮಿಫೈನಲ್‌ನಲ್ಲಿ ಮೀನಾ ಕುಮಾರಿ, ರಷ್ಯಾದ ಏಕ್ತರಿನಾ ಸೈಚೆವಾ ಎದುರು ವಿಜಯಿಯಾದರು. ಮೀನಾ ಅವರು ಹಿಂದಿನ ಆವೃತ್ತಿಯ ಟೂರ್ನಿಯಲ್ಲಿ ಕಂಚಿನ ಪದಕ ಜಯಿಸಿದ್ದರು. ಹೋದ ವರ್ಷ ಭಾರತ ತಂಡ ಒಟ್ಟು 11 ಪದಕಗಳನ್ನು ಗೆದ್ದಿತ್ತು. ಇದರಲ್ಲಿ ಎರಡು ಚಿನ್ನದ ಪದಕಗಳು ಸೇರಿದ್ದವು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.