ಪ್ರೊ ವಾಲಿಬಾಲ್‌: ಫೈನಲ್‌ಗೆ ಕ್ಯಾಲಿಕಟ್‌ ಚೆನ್ನೈ: ಅಮೋಘ ಆಟ ಆಡಿದ ಕ್ಯಾಲಿಕಟ್‌ ಹೀರೋಸ್‌ ತಂಡದವರು ಪ್ರೊ ವಾಲಿಬಾಲ್‌ ಲೀಗ್‌ ಚೊಚ್ಚಲ ಆವೃತ್ತಿಯಲ್ಲಿ ಫೈನಲ್‌ ಪ್ರವೇಶಿಸಿದ ಸಾಧನೆ ಮಾಡಿದ್ದಾರೆ. ನೆಹರು ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಮೊದಲ ಸೆಮಿಫೈನಲ್‌ನಲ್ಲಿ ಕ್ಯಾಲಿಕಟ್‌ 15–12, 15–9, 16–14 ನೇರ ಸೆಟ್‌ಗಳಿಂದ ಯು ಮುಂಬಾ ವಾಲಿ ತಂಡವನ್ನು ಪರಾಭವಗೊಳಿಸಿತು. ಕ್ಯಾಲಿಕಟ್‌ ತಂಡದ ನಾಯಕ ಜೆರೋಮ್‌ ವಿನೀತ್‌ ಒಟ್ಟು 12 ಪಾಯಿಂಟ್ಸ್‌ ಗಳಿಸಿ ಗಮನ ಸೆಳೆದರು. ಅವರು ಸ್ಪೈಕ್ಸ್‌ ಮೂಲಕ ಹತ್ತು ಪಾಯಿಂಟ್ಸ್‌ ಸಂಗ್ರಹಿಸಿದರು. ಮುಂಬಾ ತಂಡದ ವಿನೀತ್‌ ಕುಮಾರ್‌ ಏಳು ಪಾಯಿಂಟ್ಸ್‌ ಹೆಕ್ಕಿದರು. ಮೊದಲ ಸೆಟ್‌ನಲ್ಲಿ 4–2ರಿಂದ ಮುಂದಿದ್ದ ಕ್ಯಾಲಿಕಟ್‌ ತಂಡ ನಂತರವೂ ಪ್ರಾಬಲ್ಯ ಮೆರೆಯಿತು. ಎರಡನೇ ಸೆಟ್‌ನಲ್ಲೂ ಈ ತಂಡದ ಆಟಗಾರರು ಮೋಡಿ ಮಾಡಿದರು. ಮೂರನೇ ಸೆಟ್‌ನಲ್ಲಿ ಜಿದ್ದಾಜಿದ್ದಿನ ಪೈಪೋಟಿ ಕಂಡುಬಂತು. ಮುಂಬಾ ತಂಡ 6–4, 7–4ರ ಮುನ್ನಡೆ ಗಳಿಸಿದ್ದಾಗ ತಿರುಗೇಟು ನೀಡಬಹುದೆಂದು ಅಂದಾಜಿಸಲಾಗಿತ್ತು. ನಂತರ ಕ್ಯಾಲಿಕಟ್‌ ಆಟಗಾರರು ಮಿಂಚಿದರು. ಅಮೋಘ ಸರ್ವ್‌ ಮತ್ತು ಸ್ಪೈಕ್ಸ್‌ಗಳ ಮೂಲಕ ಪಾಯಿಂಟ್ಸ್‌ ಕಲೆಹಾಕಿದ ಈ ತಂಡ 12–12ರಲ್ಲಿ ಸಮಬಲ ಮಾಡಿಕೊಂಡಿತು. ಹೀಗಾಗಿ ಆಟದ ರೋಚಕತೆ ಹೆಚ್ಚಿತ್ತು. ಕೊನೆಯ ಅವಧಿಯಲ್ಲಿ ಮನಮೋಹಕ ಸರ್ವ್‌ಗಳನ್ನು ಮಾಡಿದ ಕರ್ನಾಟಕದ ಎ.ಕಾರ್ತಿಕ್‌, ಕ್ಯಾಲಿಕಟ್‌ ಆಟಗಾರರ ಸಂಭ್ರಮಕ್ಕೆ ಕಾರಣರಾದರು. ಬುಧವಾರ ನಡೆಯುವ ಎರಡನೇ ಸೆಮಿಫೈನಲ್‌ನಲ್ಲಿ ಕೊಚ್ಚಿ ಬ್ಲೂ ಸ್ಪೈಕರ್ಸ್‌ ಮತ್ತು ಚೆನ್ನೈ ಸ್ಪಾರ್ಟನ್ಸ್‌ ಪೈಪೋಟಿ ನಡೆಸಲಿವೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.