ರಾಜ್ಯ ಕಾನೂನು ವಿವಿ ಅಥ್ಲೆಟಿಕ್: ಗದುಗಿನ ಮಾನ್ವಿ ಕಾಲೇಜು ಚಾಂಪಿಯನ್‌ ಧಾರವಾಡ: ಕರ್ನಾಟಕ ಕಾನೂನು ವಿಶ್ವವಿದ್ಯಾಲಯದ ಅಂತರಕಾಲೇಜು ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಗದುಗಿನ ಕೆಎಲ್‌ಇ ಎಸ್‌.ಎ. ಮಾನ್ವಿ ಕಾನೂನು ಕಾಲೇಜು 123 ಅಂಕಗಳೊಂದಿಗೆ ಸಮಗ್ರ ವೀರಾಗ್ರಣಿ ಪ್ರಶಸ್ತಿ ಪಡೆದುಕೊಂಡಿತು. ಇಲ್ಲಿನ ಆರ್‌.ಎನ್‌.ಶೆಟ್ಟಿ ಕ್ರೀಡಾಂಗಣದಲ್ಲಿ ಕಳೆದ ಎರಡು ದಿನಗಳಿಂದ ನಡೆದ ಕ್ರೀಡಾಕೂಟದ ಅಂತಿಮ ದಿನವಾದ ಗುರುವಾರ, ವಿಜೇತ ತಂಡಗಳಿಗೆ ಬಹುಮಾನ ವಿತರಿಸಲಾಯಿತು. ಹುಬ್ಬಳ್ಳಿಯ ಕೆಎಲ್‌ಇ ಗುರುಸಿದ್ಧಪ್ಪ ಕೋತಂಬ್ರಿ ಕಾನೂನು ಕಾಲೇಜು ತಂಡ 88 ಅಂಕಗಳೊಂದಿಗೆ ದ್ವಿತೀಯ ಸ್ಥಾನ ಪಡೆಯಿತು. ಪುತ್ತೂರಿನ ವಿವೇಕಾನಂದ ಕಾನೂನು ಕಾಲೇಜು 56 ಅಂಕಗಳೊಂದಿಗೆ ತೃತೀಯ ಸ್ಥಾನ ಪಡೆದುಕೊಂಡಿತು. ಪುರುಷರ ವಿಭಾಗದಲ್ಲಿ ವೈಯಕ್ತಿಕ ಚಾಂಪಿಯನ್‌ ಆಗಿ ಎಸ್‌.ಎ.ಮಾನ್ವಿ ಕಾಲೇಜಿನ ಶಿವಪ್ರಸಾದ ಮನತುರಗಿಮಠ ಅವರು ಹೊರಹೊಮ್ಮಿದರು. 400 ಮೀ, 800 ಮೀ. ಓಟದಲ್ಲಿ ಪ್ರಥಮ ಹಾಗೂ 100 ಮೀಟರ್ ಓಟದಲ್ಲಿ ದ್ವಿತೀಯ ಸ್ಥಾನದೊಂದಿಗೆ 19 ಅಂಕಗಳೊಂದಿಗೆ ಉತ್ತಮ ಅಥ್ಲೀಟ್ ಅನ್ನಿಸಿಕೊಂಡರು. ಮಹಿಳಾ ವಿಭಾಗದಲ್ಲಿ ಇದೇ ಕಾಲೇಜಿನ ಎಚ್.ಎಂ.ಸಹನಾ 21 ಅಂಕಗಳೊಂದಿಗೆ ಉತ್ತಮ ಅಥ್ಲೀಟ್ ಬಹುಮಾನ ಪಡೆದರು. ಇವರು 400 ಮೀ, 800 ಮೀ. ಓಟ ಮತ್ತು ಉದ್ದ ಜಿಗಿತದಲ್ಲಿ ಪ್ರಥಮ ಸ್ಥಾನಪಡೆದುಕೊಂಡಿದ್ದಾರೆ. ತಂಡಗಳಲ್ಲಿ ಪುರುಷರ ವಿಭಾಗದಲ್ಲಿ ಗದುಗಿನ ಎಸ್‌.ಎ.ಮಾನ್ವಿ ಕಾಲೇಜು ಪ್ರಥಮ ಸ್ಥಾನ, ಹುಬ್ಬಳ್ಳಿಯ ಕೆಎಲ್ಇ ಗುರುಸಿದ್ಧೇಶ್ವರ ಕೋತಂಬ್ರಿ ಕಾಲೇಜು ದ್ವಿತೀಯ ಮತ್ತು ಪುತ್ತೂರಿನ ವಿವೇಕಾನಂದ ಕಾನೂನು ಕಾಲೇಜು ತೃತೀಯ ಬಹುಮಾನ ಪಡೆಯಿತು. ಮಹಿಳಾ ವಿಭಾಗದಲ್ಲಿ ಹುಬ್ಬಳ್ಳಿಯ ಕೆಎಲ್‌ಇ ಗುರುಸಿದ್ಧೇಶ್ವರ ಕೋತಂಬ್ರಿ ಕಾಲೇಜು ಪ್ರಥಮ ಬಹುಮಾನ ಪಡೆಯಿತು. ಮೈಸೂರಿನ ಜೆಎಸ್‌ಎಸ್ ಕಾನೂನು ಕಾಲೇಜು ದ್ವಿತೀಯ ಮತ್ತು ಗದುಗಿನ ಎಸ್‌.ಎ.ಮಾನ್ವಿ ಕಾಲೇಜು ತೃತೀಯ ಸ್ಥಾನ ಪಡೆಯಿತು. ಬೆಂಗಳೂರಿನ ಗಾರ್ಡನ್ ಸಿಟಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ವಿ.ಬಿ.ಕುಟನ್ಹೊ ವಿಜೇತರಿಗೆ ಬಹುಮಾನ ವಿತರಿಸಿದರು. ಕಾನೂನು ವಿವಿ ಕುಲಪತಿ ಪ್ರೊ. ಪಿ.ಈಶ್ವರ ಭಟ್‌ ಅಧ್ಯಕ್ಷತೆ ವಹಿಸಿದ್ದರು. ನಿರ್ದೇಶಕ ಪ್ರೊ. ಸಿ.ಎಸ್.ಪಾಟೀಲ, ಕುಲಸಚಿವರಾದ ಡಾ. ರತ್ನಾ ಭರಮಗೌಡರ, ಡಾ. ಜಿ.ಬಿ.ಪಾಟೀಲ, ಕ್ರೀಡಾ ನಿರ್ದೇಶಕ ಖಾಲೀದ್ ಖಾನ್ ಇದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.