ಬ್ಯಾಸ್ಕೆಟ್‌ಬಾಲ್‌ ಬ್ಲೂಸ್‌ಗೆ ಜಯ ಬೆಂಗಳೂರು: ಅಮೋಘ ಆಟವಾಡಿದ ಸದರ್ನ್‌ ಬ್ಲೂಸ್ ತಂಡದವರು ರಾಜ್ಯ ‘ಎ’ ಡಿವಿಷನ್‌ ಬ್ಯಾಸ್ಕೆಟ್‌ಬಾಲ್ ಲೀಗ್‌ನಲ್ಲಿ ಭರ್ಜರಿ ಜಯ ಸಾಧಿಸಿದರು. ಗುರುವಾರದ ಪಂದ್ಯದಲ್ಲಿ ಈ ತಂಡ ಯಂಗ್ ಒರಾಯನ್ಸ್‌ ಎದುರು 83–66ರಿಂದ ಗೆದ್ದಿತು. 28 ಪಾಯಿಂಟ್‌ ಗಳಿಸಿದ ಅಖಿಲ್‌ ಮತ್ತು 14 ಪಾಯಿಂಟ್ ಗಳಿಸಿದ ಬೆಂಜಮಿನ್‌ ಅವರು ಬ್ಲೂಸ್‌ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಮೊದಲಾರ್ಧದಲ್ಲಿ 34–27ರ ಮುನ್ನಡೆ ಸಾಧಿಸಿದ್ದ ಬ್ಲೂಸ್‌ ದ್ವಿತೀಯಾರ್ಧದಲ್ಲಿ ಇನ್ನಷ್ಟು ಆಕ್ರಮಣಕಾರಿಯಾಗಿ ಆಡಿತು. ಮತ್ತೊಂದು ಪಂದ್ಯದಲ್ಲಿ ವಿಜಯ ಬ್ಯಾಂಕ್‌ ತಂಡ ಮಂಗಳೂರು ಬ್ಯಾಸ್ಕೆಟ್‌ಬಾಲ್‌ ಕ್ಲಬ್‌ ವಿರುದ್ಧ 76–44ರಿಂದ ಗೆದ್ದಿತು. ವಿಜಯ ಬ್ಯಾಂಕ್ ಪರ ಅರವಿಂದ 15, ಹರೀಶ್‌ 12 ‍ಪಾಯಿಂಟ್ ಗಳಿಸಿದರು. ಮಂಗಳೂರು ಬಿಸಿಗಾಗಿ ಶಶಾಂಕ್‌ 15, ಅಶೋಕ್‌ 10 ಪಾಯಿಂಟ್ ಕಲೆ ಹಾಕಿದರು. ರೈಸಿಂಗ್‌ ಸ್ಟಾರ್ ಮೈಸೂರು ತಂಡ 51–50ರಿಂದ ಎನ್‌ಜಿವಿ ಬಿಸಿಯನ್ನು ಮಣಿಸಿತು. ಡಿವೈಇಎಸ್‌ ಎದುರು ಎಎಸ್‌ಸಿ 84–58ರಿಂದ ಗೆದ್ದಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.