ಅಭಿಷೇಕ್‌–ಜ್ಯೋತಿಗೆ ಚಿನ್ನದ ಸಂಭ್ರಮ ಬ್ಯಾಂಕಾಕ್ (ಪಿಟಿಐ): ಭಾರತದ ಅಭಿಷೇಕ್ ವರ್ಮಾ ಮತ್ತು ಜ್ಯೋತಿ ಸುರೇಖಾ ವೆಣ್ಣಂ ಇಲ್ಲಿ ನಡೆಯುತ್ತಿರುವ ಏಷ್ಯನ್ ಆರ್ಚರಿ ಚಾಂಪಿಯನ್‌ಷಿಪ್‌ನ ಮಿಶ್ರ ಕಾಂಪೌಂಡ್ ವಿಭಾಗದಲ್ಲಿ ಬುಧವಾರ ಚಿನ್ನದ ಪದಕ ಗೆದ್ದುಕೊಂಡರು. ಬಲಿಷ್ಠ ಎದುರಾಳಿಗಳಾದ ಚೀನಾ ತೈಪೆಯ ಯಿ ಹ್ಸಾನ್ ಚೆನ್ ಮತ್ತು ಚೀ ಲುಹ್ ಚೆನ್‌ ಅವರನ್ನು ಭಾರತದ ಜೋಡಿ 158–151ರಲ್ಲಿ ಮಣಿಸಿದರು. ಈ ಮೂಲಕ ದೇಶಕ್ಕೆ ಮೊದಲ ಚಿನ್ನ ಗಳಿಸಿಕೊಟ್ಟರು. ಚಾಂಪಿಯನ್‌ಷಿಪ್‌ನಲ್ಲಿ ಭಾರತ ಒಟ್ಟು ಏಳು ಪದಕಗಳನ್ನು ಗಳಿಸಿದೆ. ಇದರಲ್ಲಿ 2 ಬೆಳ್ಳಿ ಮತ್ತು 4 ಕಂಚಿನ ಪದಕಗಳಿವೆ. ಬೆಳಿಗ್ಗೆ ನಡೆದ ಕಾಂಪೌಂಡ್ ತಂಡ ವಿಭಾಗದ ಹಣಾಹಣಿಯಲ್ಲಿ ಅಭಿಷೇಕ್ ವರ್ಮಾ ನಿರಾಸೆ ಅನುಭವಿಸಿದ್ದರು. ಫೈನಲ್‌ನಲ್ಲಿ ಭಾರತ ತಂಡ ಕೇವಲ ಒಂದು ಪಾಯಿಂಟ್ ಅಂತರದಲ್ಲಿ (232–233) ಕೊರಿಯಾಗೆ ಮಣಿದಿತ್ತು. ವರ್ಮಾ, ರಜತ್ ಚೌಹಾಣ್‌ ಮತ್ತು ಮೋಹನ್ ಭಾರದ್ವಾಜ್‌ ಅವರನ್ನು ಒಳಗೊಂಡ ತಂಡ ಜೋವಂಗ್‌ ಯಾಂಗ್‌, ಯೂಗಿ ಚೋಯ್‌ ಮತ್ತು ಯೂನ್ ಕ್ಯೂ ಚೋಯ್‌ ಎದುರು ಆರಂಭದಲ್ಲಿ ಮೇಲುಗೈ ಸಾಧಿಸಿತ್ತು. ಆದರೆ ಎದುರಾಳಿಗಳು ನಿಧಾನವಾಗಿ ಹಿಡಿತ ಸಾಧಿಸಿ ಗೆಲುವು ಸಾಧಿಸಿದರು. ಮಿಶ್ರ ವಿಭಾಗದಲ್ಲಿ ಜ್ಯೋತಿ ಜೊತೆಗೂಡಿ ವರ್ಮಾ ಅಮೋಘ ಸಾಮರ್ಥ್ಯ ಮೆರೆದರು. ಮೊದಲ ಭಾಗದಲ್ಲಿ 2 ‘ಟೆನ್‌’ಗಳೊಂದಿಗೆ ಒಟ್ಟು 39 ಪಾಯಿಂಟ್ ಕಲೆ ಹಾಕಿದ ಅವರು ಎರಡು ಪಾಯಿಂಟ್‌ಗಳ ಮುನ್ನಡೆ ಸಾಧಿಸಿದರು. ಎರಡನೇ ಭಾಗದಲ್ಲಿ ಭಾರತದ ಜೋಡಿ 40 ಪಾಯಿಂಟ್‌ಗಳನ್ನು ಗಳಿಸಿ ಮುನ್ನಡೆಯನ್ನು ನಾಲ್ಕು ಪಾಯಿಂಟ್‌ಗಳಿಗೆ ಹೆಚ್ಚಿಸಿತು. ದ್ವಿತೀಯಾರ್ಧದ ಮೊದಲ ಭಾಗದಲ್ಲೂ ಭಾರತದ ಬಿಲ್ಗಾರರ ಪಾರಮ್ಯ ಮುಂದುವರಿಯಿತು. 39 ಪಾಯಿಂಟ್‌ಗಳೊಂದಿಗೆ ಆರು ಪಾಯಿಂಟ್‌ಗಳ ಮುನ್ನಡೆ ಸಾಧಿಸಿದ ವರ್ಮಾ ಮತ್ತು ಜ್ಯೋತಿ ಕೊನೆಯ ಭಾಗದಲ್ಲಿ ಮತ್ತೊಮ್ಮೆ 40 ಪಾಯಿಂಟ್‌ಗಳಿಗೆ ಗುರಿ ಇಟ್ಟು ಪ್ರಶಸ್ತಿ ಗೆದ್ದುಕೊಂಡರು. ಮಹಿಳೆಯರ ಕೌಂಪೌಂಡ್ ವಿಭಾಗದಲ್ಲಿ ಭಾರತಕ್ಕೆ ನಿರಾಸೆ ಕಾದಿತ್ತು. ಜ್ಯೋತಿ ಮುಸ್ಕಾನ್‌ ಕಿರಾರ್‌ ಮತ್ತು ಪ್ರಿಯಾ ಗುರ್ಜಾರ್ 215–231ರಲ್ಲಿ ಕೊರಿಯಾ ಎದುರು ಸೋತರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.