ಸ್ಕ್ವಾಷ್‌: ನಿಕೊಲಾಗೆ ಆಘಾತ ನೀಡಿದ ಜೋಷ್ನಾ ಕೈರೊ: ಭಾರತದ ಜೋಷ್ನಾ ಚಿಣ್ಣಪ್ಪ, ಮಹಿಳಾ ಬ್ಲಾಕ್‌ ಬಾಲ್‌ ಸ್ಕ್ವಾಷ್‌ ಓ‍ಪನ್‌ ಟೂರ್ನಿಯ ಆರಂಭಿಕ ಸುತ್ತಿನಲ್ಲಿ ಅಚ್ಚರಿಯ ಫಲಿತಾಂಶಕ್ಕೆ ಕಾರಣರಾಗಿದ್ದಾರೆ. ಭಾರತದ ಆಟಗಾರ್ತಿ, ಎಂಟು ಬಾರಿಯ ವಿಶ್ವ ಚಾಂ‍ಪಿಯನ್‌ ನಿಕೊಲಾ ಡೇವಿಡ್‌ಗೆ ಆಘಾತ ನೀಡಿದ್ದಾರೆ. ಸೋಮವಾರ ರಾತ್ರಿ ನಡೆದ ಹಣಾಹಣಿಯಲ್ಲಿ ಜೋಷ್ನಾ 11–8, 11–6, 12–10ರಲ್ಲಿ ಗೆದ್ದರು. ನಿಕೊಲಾ ಎದುರು ಭಾರತದ ಆಟಗಾರ್ತಿ ಜಯಿಸಿದ ಮೂರನೇ ಪಂದ್ಯ ಇದಾಗಿದೆ. ಈ ಹಿಂದೆ ಎರಡು ಬಾರಿ ನಿಕೊಲಾ ಅವರನ್ನು ಸೋಲಿಸಿದ್ದರು. ವಿಶ್ವ ಕ್ರಮಾಂಕ ಪಟ್ಟಿಯಲ್ಲಿ 16ನೇ ಸ್ಥಾನದಲ್ಲಿರುವ ಜೋಷ್ನಾ ಮೊದಲ ಎರಡು ಗೇಮ್‌ಗಳಲ್ಲಿ ಅಪೂರ್ವ ಆಟ ಆಡಿದರು. ಚುರುಕಿನ ಡ್ರಾಪ್‌ ಮತ್ತು ಅಮೋಘ ರಿಟರ್ನ್‌ಗಳ ಮೂಲಕ ಪಾಯಿಂಟ್ಸ್‌ ಕಲೆಹಾಕಿದ ಅವರು ಮಲೇಷ್ಯಾದ ಆಟಗಾರ್ತಿಯನ್ನು ಸುಲಭವಾಗಿ ಮಣಿಸಿ 2–0 ಮುನ್ನಡೆ ಗಳಿಸಿದರು. ಮೂರನೇ ಗೇಮ್‌ನಲ್ಲಿ ನಿಕೊಲಾ, ಲಯ ಕಂಡುಕೊಂಡರು. ಹೀಗಾಗಿ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿತ್ತು. ಒಂದು ಹಂತದಲ್ಲಿ ಉಭಯ ಆಟಗಾರ್ತಿಯರು 10–10ರಿಂದ ಸಮಬಲ ಸಾಧಿಸಿದ್ದರು. ಬಳಿಕ ಕೆಚ್ಚೆದೆಯಿಂದ ಹೋರಾಡಿದ ಭಾರತದ ಆಟಗಾರ್ತಿ ಗೆಲುವಿನ ತೋರಣ ಕಟ್ಟಿದರು. ಪ್ರೀ ಕ್ವಾರ್ಟರ್‌ ಫೈನಲ್‌ನಲ್ಲಿ ಜೋಷ್ನಾ, ಇಂಗ್ಲೆಂಡ್‌ನ ಆಟಗಾರ್ತಿ, ಚಾಂಪಿಯನ್‌ಷಿಪ್‌ನಲ್ಲಿ ಆರನೇ ಶ್ರೇಯಾಂಕ ಹೊಂದಿರುವ ಸಾರಾ ಜೇನ್‌ ಪೆರಿ ಎದುರು ಹೋರಾಡಲಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.