ವೆಂಕಟಾಪುರದ ಶಾಹಿದಾ ಜಯಭೇರಿ ಹೊಸಮಲಪನಗುಡಿ (ಹಂಪಿ): ಹಂಪಿ ಉತ್ಸವದ ಕೊನೆಯ ದಿನವಾದ ಭಾನುವಾರ ಮಧ್ಯಾಹ್ನ ಉರಿಬಿಸಿಲಿನಲ್ಲಿ ನಡೆದಮಹಿಳೆಯರ 55ಕೆ.ಜಿ.ವಿಭಾಗದ ಪಂದ್ಯದಲ್ಲಿ, ಗದಗ ಜಿಲ್ಲೆಯ ವೆಂಕಟಾಪುರದ ಶಾಹೀದಾ ಬೇಗಂ ಅವರು ಹುಯಿಲಗೋಳದ ಶ್ವೇತಾ ಎಸ್.ಬೆಳಗಟ್ಟಿಯವರನ್ನು ಎರಡೇ ನಿಮಿಷದಲ್ಲಿ ಚಿತ್ ಮಾಡಿ ಪ್ರಶಸ್ತಿ ಗೆದ್ದರು. ದೇಹದ ತೂಕದ ಆಧಾರದಲ್ಲಿ ಮೊದಲ ಬಾರಿಗೆ ಆಯೋಜಿಸಿದ್ದ ಪಂದ್ಯಾವಳಿಗೆ ನಾಕೌಟ್ ಮೂಲಕ ಮಹಿಳೆಯರ ಮೂರು ಹಾಗೂ ಪುರುಷರ ಐದು ಜೋಡಿಯನ್ನು ಆಯ್ಕೆ ಮಾಡಿ ಸ್ಪರ್ಧೆ ಏರ್ಪಡಿಸಲಾಗಿತ್ತು. ಮಹಿಳೆಯರ 50 ಕೆ.ಜಿ.ವಿಭಾಗದಲ್ಲಿ ಮುಂಡರಗಿಯ ಬಶೀರಾ ವಕ್ರದ್ ಅವರು ಜಿಂದಾಲ್ ವಿಜಯನಗರ ಸ್ಟೀಲ್‍ನ ಜಯಶ್ರೀ ಗುಡಗಂಟಿ ಅವರನ್ನು ಸೋಲುಣಿಸಿದರು. 55 ಕೆ.ಜಿ.ಒಳಗಿನವರ ವಿಭಾಗದಲ್ಲಿ ವಿಜಯಪುರದಸೋನಿಯಾ ಜಾಧವ್ ಅವರು ರೋಣದ ಶಶಿಕಲಾ ಅವರನ್ನು ಮಣಿಸಿದರು. 57 ಕೆ.ಜಿ. ಒಳಗಿನವರ ವಿಭಾಗದಲ್ಲಿ ಗದಗದ ಪೈಲ್ವಾನ್ ಬಸವರಾಜ ಈರಪ್ಪ ಅವರು ಇ.ವಿರೂಪಾಕ್ಷ ಅವರನ್ನು ಮೂರೇ ನಿಮಿಷದಲ್ಲಿ ಚಿತ್ ಮಾಡಿದರು. ಏಕಲಂಗಿ ಪಟ್ಟಿನ ಮೂಲಕ ನೆರೆದ ಕುಸ್ತಿ ಅಭಿಮಾನಿಗಳಿಂದ ಚಪ್ಪಾಳೆ ಗಿಟ್ಟಿಸಿದರು. 61 ಕೆ.ಜಿ. ಒಳಗಿನವರ ವಿಭಾಗದಲ್ಲಿ ಗಂಗಾವತಿಯ ಭೂಪತಿ ಅವರು ಹರಪನಹಳ್ಳಿಯ ಶರತ್ ಅವರನ್ನು ಮಣಿಸಿದರು. 65 ಕೆ.ಜಿ.ವಿಭಾಗದಲ್ಲಿ ದಾವಣಗೆರೆಯ ಡಿ.ರಾಮಕುಮಾರ ಅವರು ಪ್ರಶಾಂತಗೌಡ ಅವರಿಗೆ ಸೋಲುಣಿಸಿದರು. 70 ಕೆ.ಜಿ. ವಿಭಾಗದಲ್ಲಿ ದಾವಣ ಗೆರೆಯ ಮಂಜುನಾಥ ನರೇಗಲ್, ಕಂಪ್ಲಿಯ ಮಾರುತಿ ಅವರನ್ನು ಚಿತ್ ಮಾಡಿ ಗಮನ ಸೆಳೆದರು. 74 ಕೆ.ಜಿ.ವಿಭಾಗದಲ್ಲಿ ದಾವಣಗೆರೆಯ ಸಿ.ಆನಂದ್, ಹರಪನಹಳ್ಳಿಯ ಎಸ್.ಕಿರಣ್‌ಗೆ ಸೋಲಿನ ರುಚಿ ಉಣಿಸಿದರು. ವಿಜೇತರಿಗೆ ₹20 ಸಾವಿರ ನಗದು, ಎರಡನೇ ಸ್ಥಾನ ಪಡೆದವರಿಗೆ₹ 15 ಸಾವಿರ ನಗದು ಮತ್ತು ಪ್ರಶಸ್ತಿ ಪತ್ರ ನೀಡಲಾಯಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.