ಬ್ಯಾಸ್ಕೆಟ್‌ಬಾಲ್‌: ಜೆಎಸ್‌ಸಿ ಜಯಭೇರಿ ಬೆಂಗಳೂರು: ಸಚಿನ್‌ ಮತ್ತು ಶ್ರೀರಾಮ್‌ ಅವರ ಅಮೋಘ ಆಟದ ನೆರವಿನಿಂದ ಜೆಎಸ್‌ಸಿ ತಂಡ ಎನ್‌.ಸಿ.ಪರಪ್ಪ ಸ್ಮಾರಕ ರಾಜ್ಯ ‘ಎ’ ಡಿವಿಷನ್‌ ಲೀಗ್‌ ಬ್ಯಾಸ್ಕೆಟ್‌ಬಾಲ್‌ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ ಜಯಭೇರಿ ಮೊಳಗಿಸಿದೆ. ಕಂಠೀರವ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಹಣಾಹಣಿಯಲ್ಲಿ ಜೆಎಸ್‌ಸಿ 93–83 ಪಾಯಿಂಟ್ಸ್‌ನಿಂದ ಬಿಎಸ್‌ಎನ್‌ಎಲ್‌ ತಂಡವನ್ನು ಪರಾಭವಗೊಳಿಸಿತು. ಆರಂಭದಿಂದಲೇ ಮಿಂಚಿನ ಸಾಮರ್ಥ್ಯ ತೋರಿದ ಜೆಎಸ್‌ಸಿ ವಿರಾಮದ ವೇಳೆಗೆ 45–34ರಿಂದ ಮುಂದಿತ್ತು. ಈ ತಂಡದ ಸಚಿನ್‌ ಮತ್ತು ಶ್ರೀರಾಮ್‌ ಕ್ರಮವಾಗಿ 26 ಮತ್ತು 23 ಪಾಯಿಂಟ್ಸ್‌ ಗಳಿಸಿದರು. ಬಿಎಸ್‌ಎನ್‌ಎಲ್‌ ತಂಡದ ನರೇಶ್‌ 34 ಪಾಯಿಂಟ್ಸ್‌ ಸಂಗ್ರಹಿಸಿ ಅಭಿಮಾನಿಗಳನ್ನು ರಂಜಿಸಿದರು. ತ್ರಿಶೂಲ್‌ 21 ಪಾಯಿಂಟ್ಸ್‌ ಕಲೆಹಾಕಿ ಸೋಲಿನ ಅಂತರ ತಗ್ಗಿಸಲಷ್ಟೇ ಶಕ್ತರಾದರು. ಇನ್ನೊಂದು ಪಂದ್ಯದಲ್ಲಿ ಬೀಗಲ್ಸ್‌ ಕ್ಲಬ್‌ 49–25 ಪಾಯಿಂಟ್ಸ್‌ನಿಂದ ಯಂಗ್‌ ಓರಿಯನ್ಸ್‌ ಎದುರು ಗೆದ್ದಿತು. ಬೀಗಲ್ಸ್‌ ತಂಡದ ದೇವಿ ಪ್ರಸಾದ್‌ 26 ಪಾಯಿಂಟ್ಸ್‌ ಗಳಿಸಿ ಗಮನ ಸೆಳೆದರು. 29–16ರ ಮುನ್ನಡೆಯೊಂದಿಗೆ ವಿರಾಮಕ್ಕೆ ಹೋಗಿದ್ದ ಈ ತಂಡ ದ್ವಿತೀಯಾರ್ಧದಲ್ಲೂ ಪ್ರಾಬಲ್ಯ ಮೆರೆಯಿತು. ಓರಿಯನ್ಸ್‌ ತಂಡದ ಇವಾನ್‌ ಏಳು ಪಾಯಿಂಟ್ಸ್‌ ಗಳಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.