ವಿಜಯ ಬ್ಯಾಂಕ್‌ ಚಾಂಪಿಯನ್‌ ಬೆಂಗಳೂರು: ಅರವಿಂದ್‌ ಮತ್ತು ಕಾರ್ತಿಕ್‌ ಅವರ ಮಿಂಚಿನ ಆಟದ ನೆರವಿನಿಂದ ವಿಜಯ ಬ್ಯಾಂಕ್‌ ತಂಡ ಎನ್‌.ಸಿ.ಪರಪ್ಪ ಸ್ಮಾರಕ ರಾಜ್ಯ ‘ಎ’ ಡಿವಿಷನ್‌ ಲೀಗ್‌ ಬ್ಯಾಸ್ಕೆಟ್‌ಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ಕಂಠೀರವ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಫೈನಲ್‌ನಲ್ಲಿ ವಿಜಯ ಬ್ಯಾಂಕ್‌ 95–84 ಪಾಯಿಂಟ್ಸ್‌ನಿಂದ ಎಎಸ್‌ಸಿ ತಂಡವನ್ನು ಪರಾಭವಗೊಳಿಸಿತು. ಮೊದಲ ಕ್ವಾರ್ಟರ್‌ನಲ್ಲಿ ಎಎಸ್‌ಸಿ ಪ್ರಾಬಲ್ಯ ಮೆರೆಯಿತು. ಈ ತಂಡದ ದಾಸ್‌ (17 ಪಾಯಿಂಟ್ಸ್‌) ಚೆಂಡನ್ನು ನಿಖರವಾಗಿ ‘ಬ್ಯಾಸ್ಕೆಟ್‌’ ಮಾಡುತ್ತಾ ಅಭಿಮಾನಿಗಳನ್ನು ರಂಜಿಸಿದರು. ಆದರೆ ಎರಡನೇ ಕ್ವಾರ್ಟರ್‌ನಲ್ಲಿ ವಿಜಯ ಬ್ಯಾಂಕ್‌ ಆಟ ರಂಗೇರಿತು. ಅರವಿಂದ್‌ 24 ಪಾಯಿಂಟ್ಸ್‌ ಗಳಿಸಿ ಗಮನ ಸೆಳೆದರು. ಹೀಗಾಗಿ ತಂಡ 41–38ರ ಮುನ್ನಡೆಯೊಂದಿಗೆ ವಿರಾಮಕ್ಕೆ ಹೋಯಿತು. ದ್ವಿತೀಯಾರ್ಧದ ಮೊದಲ ಕ್ವಾರ್ಟರ್‌ನಲ್ಲೂ ವಿಜಯ ಬ್ಯಾಂಕ್‌ ಮೇಲುಗೈ ಸಾಧಿಸಿತು. ಈ ತಂಡದ ಕಾರ್ತಿಕ್‌ 18 ಪಾಯಿಂಟ್ಸ್‌ ಕಲೆಹಾಕಿದರು. ನಾಲ್ಕನೇ ಕ್ವಾರ್ಟರ್‌ನಲ್ಲಿ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿತು. ಹೀಗಾಗಿ 22–22, 24–24, 26–26 ಹೀಗೆ ಸಮಬಲದ ಹಣಾಹಣಿ ಕಂಡುಬಂತು. ಈ ಕ್ವಾರ್ಟರ್‌ನಲ್ಲಿ ಎಎಸ್‌ಸಿ, ಎದುರಾಳಿ ತಂಡಕ್ಕಿಂತಲೂ ಒಂದು ಪಾಯಿಂಟ್‌ (27–26) ಹೆಚ್ಚು ಕಲೆಹಾಕಿತು. ಹೀಗಿದ್ದರೂ ತಂಡದ ಪ್ರಶಸ್ತಿಯ ಕನಸು ಕೈಗೂಡಲಿಲ್ಲ. ಈ ತಂಡದ ಜಿತೇಂದ್ರ (12 ಪಾಯಿಂಟ್ಸ್‌) ಹೋರಾಟವೂ ವ್ಯರ್ಥವಾಯಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.