ಐ–ಲೀಗ್‌: ಮಿನರ್ವ ಪಂಜಾಬ್‌ ತಂಡಕ್ಕೆ ಮರು ಪಂದ್ಯದ ಅವಕಾಶ ನವದೆಹಲಿ: ಭದ್ರತೆಯ ಕಾರಣ ಹೇಳಿ ಕಾಶ್ಮೀರದಲ್ಲಿ ಐ–ಲೀಗ್ ಪಂದ್ಯ ಆಡಲು ನಿರಾಕರಿಸಿದ್ದ ಹಾಲಿ ಚಾಂಪಿಯನ್‌ ಮಿನರ್ವ ಪಂಜಾಬ್‌ಗಾಗಿ ಮತ್ತೊಮ್ಮೆ ಪಂದ್ಯ ಆಯೋಜಿಸಲು ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್‌ (ಎಐಎಫ್ಎಫ್‌) ನಿರ್ಧರಿಸಿದೆ. ಶ್ರೀನಗರದಲ್ಲಿ ಫೆಬ್ರುವರಿ 18ರಂದು ನಡೆಯಬೇಕಾಗಿದ್ದ ರಿಯಲ್ ಕಾಶ್ಮೀರ ಎದುರಿನ ಪಂದ್ಯದಲ್ಲಿ ಆಡುವುದರಿಂದ ಮಿನರ್ವ ಹಿಂದೆ ಸರಿದಿತ್ತು. ಪುಲ್ವಾಮಾ ದಾಳಿಯ ನಂತರ ವಿದೇಶಿ ಆಟಗಾರರು ಶ್ರೀನಗರಕ್ಕೆ ಹೋಗಲು ಸಿದ್ಧರಿರಲಿಲ್ಲ. ಹೀಗಾಗಿ ಪಂದ್ಯ ಆಡುವುದಿಲ್ಲ ಎಂದು ತಂಡದ ಆಡಳಿತ ಹೇಳಿತ್ತು. ಸೂಕ್ತ ಭದ್ರತೆ ಒದಗಿಸಲಾಗುವುದು ಎಂದು ಎಐಎಫ್ಎಫ್‌ ಭರವಸೆ ನೀಡದ ಕಾರಣ ಶ್ರೀನಗರಕ್ಕೆ ತೆರಳದಂತೆ ವಿದೇಶಿ ಆಟಗಾರರಿಗೆ ಅವರ ದೇಶದ ಫುಟ್‌ಬಾಲ್ ಸಂಸ್ಥೆಗಳು ಸೂಚಿಸಿದ್ದವು ಎಂದು ಮಿನರ್ವ ತಂಡದ ಆಡಳಿತ ವಿವರಿಸಿತ್ತು. ಈ ಹಿನ್ನೆಲೆಯಲ್ಲಿ ಸೋಮವಾರ ತುರ್ತು ಸಭೆ ಸೇರಿದ ಎಐಎಫ್ಎಫ್‌, ಪಂದ್ಯವನ್ನು ಇನ್ನೊಂದು ಬಾರಿ ನಡೆಸಲು ನಿರ್ಧರಿಸಿತು. ಆದರೆ ದಿನಾಂಕ ನಿಗದಿ ಮಾಡಲಿಲ್ಲ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.