ಡಕಾರ್‌ ರ‍್ಯಾಲಿ: ಹೀರೊ ತಂಡ ಪ್ರಕಟ ನವದೆಹಲಿ (ಪಿಟಿಐ): ಮುಂದಿನ ವರ್ಷ ನಡೆಯುವ ಡಕಾರ್‌ ರ‍್ಯಾಲಿಗೆ ಮಂಗಳವಾರ ಹೀರೊ ಮೋಟರ್‌ಸ್ಪೋರ್ಟ್ಸ್‌ ತಂಡವನ್ನು ಪ್ರಕಟಿಸಲಾಗಿದೆ. ಈ ವರ್ಷ ನಡೆದಿದ್ದ ಪಾನ್‌ ಆಫ್ರಿಕಾ ರ‍್ಯಾಲಿಯಲ್ಲಿ ಚಾಂಪಿಯನ್‌ ಆಗಿದ್ದ ಜಾವೊಕಿಮ್‌ ರಾಡ್ರಿಗಸ್‌, ಭಾರತದ ಸಿ.ಎಸ್‌.ಸಂತೋಷ್‌, ಓರಿಯಲ್‌ ಮೆನಾ ಮತ್ತು ಈ ಹಿಂದೆ ವಿಶ್ವ ರ‍್ಯಾಲಿ ಚಾಂಪಿಯನ್‌ ಆಗಿದ್ದ ಪಾಲೊ ಗೊಂಜಾಲ್ವೆಸ್‌ ಅವರು ತಂಡದಲ್ಲಿ ಸ್ಥಾನ ಗಳಿಸಿದ್ದಾರೆ. ಇದೇ ಮೊದಲ ಸಲ ಹೀರೊ ತಂಡದ ನಾಲ್ಕು ಮಂದಿ ಡಕಾರ್‌ ರ‍್ಯಾಲಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ರ‍್ಯಾಲಿಯಲ್ಲಿ ಒಟ್ಟು ಮೂರು ಬಾರಿ ಸ್ಪರ್ಧಿಸಿರುವ ಹೀರೊ ತಂಡ ಎರಡು ಸಲ ಅಗ್ರ ಹತ್ತರೊಳಗೆ ಸ್ಥಾನ ಪಡೆದಿತ್ತು. ‘ಈ ಋತುವಿನಲ್ಲಿ ನಡೆದ ವಿವಿಧ ರ‍್ಯಾಲಿಗಳಲ್ಲಿ ಉತ್ತಮ ಸಾಮರ್ಥ್ಯ ತೋರಿರುವುದರಿಂದ ಆತ್ಮವಿಶ್ವಾಸ ಇಮ್ಮಡಿಸಿದೆ. ಡಕಾರ್‌ ರ‍್ಯಾಲಿಯಲ್ಲಿ ಅಗ್ರ 20ರೊಳಗೆ ಸ್ಥಾನ ಗಳಿಸುವುದು ನನ್ನ ಗುರಿ’ ಎಂದು ಕರ್ನಾಟಕದ, 35 ವರ್ಷದ ಬೈಕ್ ಸಾಹಸಿ ಸಂತೋಷ್‌ ಹೇಳಿದ್ದಾರೆ. ಒಟ್ಟು 7,500 ಕಿಲೊ ಮೀಟರ್ಸ್‌ ದೂರದ ರ‍್ಯಾಲಿಯು 12 ಹಂತಗಳಲ್ಲಿ ನಡೆಯಲಿದೆ. ಇದೇ ಮೊದಲ ಬಾರಿ ಸೌದಿ ಅರೇಬಿಯಾದಲ್ಲಿ ಆಯೋಜನೆಯಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.