ಭಾರತದ ಕ್ಲಬ್‌ ಮೇಲೆ ಮ್ಯಾನ್‌ ಸಿಟಿ ಕಣ್ಣು ಲಂಡನ್‌: ಇಂಗ್ಲಿಷ್‌ ಪ್ರೀಮಿ ಯರ್‌ ಲೀಗ್‌ನ ಪ್ರಮುಖ ತಂಡಗಳಲ್ಲಿ ಒಂದಾದ ಮ್ಯಾಂಚೆಸ್ಟರ್ ಸಿಟಿಯ ಫ್ರಾಂಚೈಸ್‌ ಸಿಟಿ ಫುಟ್‌ಬಾಲ್‌ ಗ್ರೂಪ್‌ (ಸಿಎಫ್‌ಸಿ) ಈ ಬಾರಿ ಭಾರತದ ಫುಟ್‌ಬಾಲ್ ತಂಡವೊಂದರ ಮೇಲೆ ಹೂಡಿಕೆಗೆ ಮುಂದಾಗಿದೆ. ಫ್ರಾಂಚೈಸ್‌ನ ಮುಖ್ಯ ಕಾರ್ಯನಿರ್ವಾಹಕ ಫೆರಾನ್ ಸೊರಿಯಾನೊ ಮಂಗಳವಾರ ಈ ವಿಷಯ ತಿಳಿಸಿದ್ದಾರೆ. ಸಿಎಫ್‌ಸಿ ಮಾಲೀಕ ಅಬುಧಾಬಿಯ ಶೇಕ್‌ ಮನ್ಸೂರ್‌ ಇತ್ತೀಚೆಗೆ ಚೀನಾದ ಮೂರನೇ ಡಿವಿಷನ್ ಕ್ಲಬ್‌ ಸಿಚುವಾನ್ ಜುನುಯುವನ್ನು ಖರೀದಿಸಿದ್ದರು. ಇದು ಈ ಫ್ರಾಂಚೈಸ್ ಖರೀದಿಸಿದ ಏಳನೇ ತಂಡವಾಗಿತ್ತು. ನ್ಯೂಯಾರ್ಕ್ ಸಿಟಿ, ಮೆಲ್ಬರ್ನ್ ಸಿಟಿ, ಜಪಾನ್‌ನ ಯೊಕೊಹಾಮ, ಆ‌ಲ್ಟಿಕೊ ಟೋರ್ಕಿ ಮತ್ತು ಗಿರೋನ ತಂಡಗಳನ್ನು ಈ ಮೊದಲೇ ತನ್ನದಾಗಿಸಿಕೊಂಡಿತ್ತು. ‘ಫುಟ್‌ಬಾಲ್ ಬಗ್ಗೆ ನಿಜವಾದ ಆಸಕ್ತಿ ಇರುವ ದೇಶಗಳ ಕ್ಲಬ್‌ಗಳ ಮೇಲೆ ಆಸಕ್ತಿ ಹೊಂದಿದ್ದೇವೆ. ಭಾರತದ ಮೇಲೆ ಎರಡು ವರ್ಷಗಳಿಂದ ಕಣ್ಣಿಟ್ಟಿದ್ದೆವು. ಈ ವರ್ಷ ಈ ಕಾತರ ಕೊನೆಗೊಳ್ಳಲಿದೆ. ಅಲ್ಲಿನ ತಂಡವೊಂದನ್ನು ಖರೀದಿಸಲಿದ್ದೇವೆ’ ಎಂದು ಫೆರಾನ್ ತಿಳಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.