ಸರ್ಕಾರದ ಮೊರೆ ಹೋದ ಡಬ್ಲ್ಯುಎಫ್‌ಐ ನವದೆಹಲಿ: ಕುಸ್ತಿಪಟುಗಳು ಮತ್ತು ಫೆಡರೇಷನ್‌ನ ಹಿತ ಕಾಪಾಡುವಂತೆ ಭಾರತ ಕುಸ್ತಿ ಫೆಡರೇಷನ್‌ (ಡಬ್ಲ್ಯುಎಫ್‌ಐ) ಸರ್ಕಾರಕ್ಕೆ ಮನವಿ ಮಾಡಿದೆ. ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸುವ ಎಲ್ಲಾ ದೇಶಗಳ ಸ್ಪರ್ಧಿಗಳಿಗೆ ವೀಸಾ ನೀಡಲು ಸಿದ್ಧವಿರುವ ಬಗ್ಗೆ ಸರ್ಕಾರದಿಂದ ಲಿಖಿತ ಭರವಸೆ ಸಿಗುವವರೆಗೂ ಭಾರತದ ಜೊತೆಗಿನ ಎಲ್ಲಾ ಸಂಬಂಧಗಳನ್ನು ಕಡಿದುಕೊಳ್ಳುವಂತೆ ಯುನೈಟೆಡ್‌ ವರ್ಲ್ಡ್‌ ವ್ರೆಸ್ಲಿಂಗ್‌ (ಯುಡಬ್ಲ್ಯುಡಬ್ಲ್ಯು) ಎಲ್ಲಾ ಸದಸ್ಯ ರಾಷ್ಟ್ರಗಳಿಗೂ ಸೂಚಿಸಿದೆ. ಹೀಗಾಗಿ ಜುಲೈಯಲ್ಲಿ ನಿಗದಿಯಾಗಿರುವ ಜೂನಿಯರ್‌ ಕುಸ್ತಿ ಚಾಂಪಿಯನ್‌ಷಿಪ್‌ ಭಾರತದಿಂದ ಸ್ಥಳಾಂತರವಾಗುವ ಸಾಧ್ಯತೆ ಇದೆ. ‘ಪತ್ರದ ಮುಖೇನ ಸರ್ಕಾರಕ್ಕೆ ಸದ್ಯದ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಡುತ್ತೇನೆ. ಪತ್ರದ ಪ್ರತಿಯೊಂದನ್ನು ಪ್ರಧಾನ ಮಂತ್ರಿ ಕಚೇರಿಗೂ ಕಳುಹಿಸಿಕೊಡುತ್ತೇನೆ. ಈಗ ಉದ್ಭವಿಸಿರುವ ಸಮಸ್ಯೆಯನ್ನು ಸರ್ಕಾರ ಶೀಘ್ರವೇ ಬಗೆಹರಿಸಲಿದೆ’ ಎಂದು ಡಬ್ಲ್ಯುಎಫ್‌ಐ ಅಧ್ಯಕ್ಷ ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.