ಜಿಮ್ನಾಸ್ಟಿಕ್ಸ್‌: ಫೈನಲ್ ಪ್ರವೇಶಿಸಿದ ದೀಪಾ ಬಾಕು, ಅಜರ್‌ಬೈಜಾನ್‌: ಭಾರತದ ದೀಪಾ ಕರ್ಮಾಕರ್‌, ಇಲ್ಲಿ ಆಯೋಜನೆಯಾಗಿರುವ ಆರ್ಟಿಸ್ಟಿಕ್‌ ಜಿಮ್ನಾಸ್ಟಿಕ್ಸ್‌ ವಿಶ್ವಕಪ್‌ನಲ್ಲಿ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ. ಮಹಿಳೆಯರ ವಾಲ್ಟ್‌ ವಿಭಾಗದ ಅರ್ಹತಾ ಸುತ್ತಿನಲ್ಲಿ ಮೂರನೇ ಸ್ಥಾನ ಗಳಿಸಿ ಅವರು ಫೈನಲ್‌ಗೆ ರಹದಾರಿ ಪಡೆದರು. 2016ರ ರಿಯೊ ಒಲಿಂಪಿಕ್ಸ್‌ನಲ್ಲಿ ನಾಲ್ಕನೇ ಸ್ಥಾನ ಗಳಿಸಿ ದಾಖಲೆ ನಿರ್ಮಿಸಿದ್ದ ದೀಪಾ, ಗುರುವಾರ ನಡೆದ ಅರ್ಹತಾ ಹಂತದ ಮೊದಲ ಸುತ್ತಿನಲ್ಲಿ 14.466 ಪಾಯಿಂಟ್ಸ್‌ ಕಲೆಹಾಕಿದರು. ಎರಡನೇ ಸುತ್ತಿನಲ್ಲಿ ಭಾರತದ ಜಿಮ್ನಾಸ್ಟಿಕ್‌ ಪಟು 14.133 ಪಾಯಿಂಟ್ಸ್‌ ಹೆಕ್ಕಿದರು. ಈ ಮೂಲಕ ಸರಾಸರಿ 14.299 ಪಾಯಿಂಟ್ಸ್‌ ಸಂಗ್ರಹಿಸಿ ಮೂರನೇ ಸ್ಥಾನ ಪಡೆದರು. ಅಮೆರಿಕದ ಜೇಡ್‌ ಕೇರಿ ಅರ್ಹತಾ ಹಂತದಲ್ಲಿ ಅಗ್ರಸ್ಥಾನ ಗಳಿಸಿದರು. ಅವರು ಸರಾಸರಿ 14.700 ಪಾಯಿಂಟ್ಸ್‌ ಕಲೆಹಾಕಿದರು. ಮೆಕ್ಸಿಕೊದ ಅಲೆಕ್ಸಾ (ಸರಾಸರಿ 14.533 ಪಾ.) ಎರಡನೇ ಸ್ಥಾನ ಪಡೆದರು. ಅರ್ಹತಾ ಹಂತದಲ್ಲಿ ಅಗ್ರ ಎಂಟು ಸ್ಥಾನ ಪಡೆದಿರುವ ಸ್ಪರ್ಧಿಗಳು ಶನಿವಾರ ನಡೆಯುವ ಫೈನಲ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ. ಶುಕ್ರವಾರ ನಡೆಯುವ ಬ್ಯಾಲೆನ್ಸಡ್‌ ಬೀಮ್‌ ವಿಭಾಗದಲ್ಲಿ ದೀಪಾ ಭಾಗವಹಿಸಲಿದ್ದಾರೆ. ಹೋದ ವರ್ಷದ ನವೆಂಬರ್‌ನಲ್ಲಿ ಜರ್ಮನಿಯ ಕಾಟಬಸ್‌ನಲ್ಲಿ ನಡೆದಿದ್ದ ವಿಶ್ವಕಪ್‌ನ ವಾಲ್ಟ್‌ ವಿಭಾಗದಲ್ಲಿ ದೀಪಾ ಕಂಚಿನ ಪದಕ ಗೆದ್ದ ಸಾಧನೆ ಮಾಡಿದ್ದರು. ಮಂಡಿಯ ಗಾಯದಿಂದ ಚೇತರಿಸಿಕೊಂಡ ನಂತರ ಅವರು ಪಾಲ್ಗೊಂಡಿರುವ ಮೊದಲ ವಿಶ್ವಕಪ್‌ ಇದಾಗಿದೆ. ಗಾಯದ ಕಾರಣ ಅವರು ಜಕಾರ್ತದಲ್ಲಿ ನಡೆದಿದ್ದ ಏಷ್ಯನ್‌ ಕ್ರೀಡಾಕೂಟದ ವಾಲ್ಟ್‌ ವಿಭಾಗದ ಫೈನಲ್‌ನಿಂದ ಹಿಂದೆ ಸರಿದಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.