ಭಾರತ ಮಹಿಳೆಯರಿಗೆ ಜಯ ಪ್ರಾವಿಡೆನ್ಸ್‌, ಗಯಾನಾ: ಈಗಾಗಲೇ ಸರಣಿ ಗೆದ್ದುಕೊಂಡಿರುವ ಭಾರತ ಮಹಿಳಾ ತಂಡ, ಮಳೆಯಿಂದ ಓವರುಗಳ ಕಡಿತ ಕಂಡ ವೆಸ್ಟ್‌ ಇಂಡೀಸ್‌ ವಿರುದ್ಧದ ನಾಲ್ಕನೇ ಟಿ–20 ಪಂದ್ಯವನ್ನು ಕೂಡ ಭಾನುವಾರ ಐದು ರನ್‌ಗಳಿಂದ ಗೆದ್ದುಕೊಂಡಿತು. ಭಾರತದ ಸ್ಪಿನ್ನರ್‌ಗಳ ಉತ್ತಮ ಪ್ರದರ್ಶನ ಗೆಲುವಿಗೆ ನೆರವಾಯಿತು. ಮಳೆಯಿಂದಾಗಿ ಪಂದ್ಯವನ್ನು ತಲಾ 9 ಓವರುಗಳಿಗೆ ಇಳಿಸಲಾಗಿತ್ತು. ಬ್ಯಾಟ್‌ ಮಾಡಲು ಕಳುಹಿಸಲ್ಪಟ್ಟ ಭಾರತ 9 ಓವರುಗಳಲ್ಲಿ 7 ವಿಕೆಟ್‌ಗೆ 50 ರನ್‌ ಗಳಿಸಿತು. ಪೂಜಾ ವಸ್ತ್ರಕರ್ ಬಿಟ್ಟರೆ ಉಳಿದವರು ಯಾರೂ ಎರಡಂಕೆ ಮೊತ್ತ ತಲುಪಲು ವಿಫಲರಾದರು. ಹೇಲಿ ಮ್ಯಾಥ್ಯೂಸ್‌ 13ಕ್ಕೆ 3 ವಿಕೆಟ್‌ ಪಡೆದರು. ಆತಿಥೇಯ ತಂಡ ಸ್ಪಿನ್ನರ್‌ಗಳೆದುರು ಪರದಾಡಿ 9 ಓವರುಗಳಲ್ಲಿ 9 ವಿಕೆಟ್‌ಗೆ 45 ರನ್‌ ಗಳಿಸಲಷ್ಟೇ ಶಕ್ತವಾಯಿತು. ಅನುಜಾ ಪಾಟೀಲ (8ಕ್ಕೆ2), ದೀಪ್ತಿ ಶರ್ಮಾ (8ಕ್ಕೆ1) ಮತ್ತು ರಾಧಾ ಯಾದವ್ (8ಕ್ಕೆ1) ಎದುರಾಳಿಗಳನ್ನು ಅಂಕೆಯಲ್ಲಿಟ್ಟರು. ಆಲ್‌ರೌಂಡರ್‌ ಹೇಲಿ ಮ್ಯಾಥ್ಯೂಸ್‌ ಮತ್ತು ಚಿನೆಲಿ ಹೆಂಡ್ರಿ ತಲಾ 11 ರನ್‌ ಗಳಿಸಿದರು. ಸ್ಕೋರುಗಳು: ಭಾರತ ಮಹಿಳಾ ತಂಡ: 9 ಓವರುಗಳಲ್ಲಿ7 ವಿಕೆಟ್‌ಗೆ 50 (ಪೂಜಾ ವಸ್ತ್ರಕರ್ 10; ಹೇಲಿ ಮ್ಯಾಥ್ಯೂಸ್‌ 13ಕ್ಕೆ3); ವೆಸ್ಟ್‌ ಇಂಡೀಸ್‌: 9 ಓವರುಗಳಲ್ಲಿ 9 ವಿಕಟ್‌ಗೆ 45 (ಹೇಲಿ ಮ್ಯಾಥ್ಯೂಸ್‌ 11; ಚಿನೆಲಿ ಹೆಂಡ್ರಿ 11; ಅನುಜಾ ಪಾಟೀಲ್‌ 8ಕ್ಕೆ2). ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.