ಟಿ.ಟಿ: ಅರ್ಚನಾಗೆ ಬೆಳ್ಳಿ ಬೆಂಗಳೂರು: ಕರ್ನಾಟಕದ ಅರ್ಚನಾ ಕಾಮತ್‌, ಒಮನ್‌ನಲ್ಲಿ ನಡೆದ ಸೀಮಾಸ್ಟರ್‌ 2019 ಐಟಿಟಿಎಫ್‌ ಚಾಲೆಂಜ್‌ ಪ್ಲಸ್‌ ಟೇಬಲ್‌ ಟೆನಿಸ್‌ ಟೂರ್ನಿಯಲ್ಲಿ ಬೆಳ್ಳಿಯ ಪದಕ ಜಯಿಸಿದ್ದಾರೆ. ಶನಿವಾರ ನಡೆದ 21 ವರ್ಷದೊಳಗಿನವರ ಮಹಿಳಾ ಸಿಂಗಲ್ಸ್‌ ವಿಭಾಗದ ಫೈನಲ್‌ನಲ್ಲಿ ಅರ್ಚನಾ 7–15, 8–15, 6–15ರಲ್ಲಿ ಜಪಾನ್‌ನ ಅಗ್ರಶ್ರೇಯಾಂಕದ ಆಟಗಾರ್ತಿ ಸತ್ಸುಕಿ ಒಡೊ ಎದುರು ಪರಾಭವಗೊಂಡರು. ಬೆಂಗಳೂರಿನ ಅರ್ಚನಾ, ಪ್ರೀ ಕ್ವಾರ್ಟರ್‌ ಫೈನಲ್‌ನಲ್ಲಿ 3–0 ಗೇಮ್‌ಗಳಿಂದ ರಷ್ಯಾದ ಎರಡನೇ ಶ್ರೇಯಾಂಕದ ಆಟಗಾರ್ತಿ ವಲೇರಿ ಶಚೆರ್‌ಬತಿಕ್‌ಗೆ ಆಘಾತ ನೀಡಿದ್ದರು. ಟೂರ್ನಿಯಲ್ಲಿ ಒಂಬತ್ತನೇ ಶ್ರೇಯಾಂಕ ಹೊಂದಿದ್ದ ರಾಜ್ಯದ ಆಟಗಾರ್ತಿ ಕ್ವಾರ್ಟರ್‌ ಫೈನಲ್‌ನಲ್ಲಿ 3–0ರಲ್ಲಿ ಸಿಂಗಪುರದ ಗೊಯಿ ರುಯಿ ಕ್ಸಿಯಾನ್‌ ಎದುರು ಗೆದ್ದಿದ್ದರು. ಸೆಮಿಫೈನಲ್‌ನಲ್ಲಿ ಅರ್ಚನಾ 3–2ರಲ್ಲಿ ರಷ್ಯಾದ ಮರಿಯಾ ತಯಿಲಕೋವಾ ಅವರನ್ನು ಮಣಿಸಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.