ಒತ್ತಡಕ್ಕೆ ಮಣಿಯಿತೇ ಬಿಸಿಸಿಐ? ಭಾರತದ ಎಲ್ಲ ರಾಷ್ಟ್ರೀಯ ಕ್ರೀಡಾ ಸಂಸ್ಥೆಗಳು ಪಾಲಿಸುತ್ತಿರುವ ನಿಯಮವೊಂದನ್ನು ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಕಡೆಗಣಿಸಿಕೊಂಡೇ ಬಂದಿತ್ತು. ವಿಶ್ವ ಉದ್ದೀಪನ ಮದ್ದು ತಡೆ ಘಟಕದ (ವಾಡಾ) ನಿಯಮದ ಪ್ರಕಾರ ಭಾರತದ ಕ್ರೀಡಾಪಟುಗಳು ರಾಷ್ಟ್ರೀಯ ಉದ್ದೀಪನಾ ಮದ್ದು ತಡೆ ಘಟಕದಿಂದ (ನಾಡಾ) ಉದ್ದೀಪನಾ ಮದ್ದು ಪರೀಕ್ಷೆಗೆ ಒಳಗಾಗಬೇಕು. ಕ್ರಿಕೆಟ್‌ ಆಟಗಾರರಿಗೆ ಮಾತ್ರ ಈ ನಿಯಮ ಅನ್ವಯಿಸುತ್ತಿರಲಿಲ್ಲ. ಬಿಸಿಸಿಐ ತಾನೇ ಆಯ್ಕೆಮಾಡಿಕೊಂಡ ಸಂಸ್ಥೆ ಮೂಲಕ ಉದ್ದೀಪನ ಮದ್ದು ಪರೀಕ್ಷೆ ನಡೆಸುತ್ತಿತ್ತು. ಆದರೆ ಇದೀಗ ಕ್ರಿಕೆಟ್‌ ಆಟಗಾರರೂ ನಾಡಾ ವ್ಯಾಪ್ತಿಗೆ ಬಂದಿದ್ದಾರೆ. ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಘಟಕದ ಜತೆಗೂಡಿ ಕಾರ್ಯನಿರ್ವಹಿಸಲು ಸಿದ್ಧ ಎಂದು ಬಿಸಿಸಿಐ ಹೇಳಿದೆ. ಮೊದಲ ಹಂತದಲ್ಲಿ ಆರು ತಿಂಗಳವರೆಗೆ ಮಾತ್ರ ಒಪ್ಪಂದ ಮಾಡಿಕೊಳ್ಳಲಾಗಿದೆ. ನಾಡಾದ ಕಾರ್ಯವೈಖರಿ ತೃಪ್ತಿ ತರದಿದ್ದರೆ ಒಪ್ಪಂದ ಮುಂದುವರಿಯದು ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ. ಆರು ತಿಂಗಳ ಬಳಿಕ ಬಿಸಿಸಿಐ ಯಾವ ನಿರ್ಧಾರ ತೆಗೆದುಕೊಳ್ಳಲಿದೆಯೋ ಎಂಬುದು ತಿಳಿಯದು. ಆದರೆ ಇಷ್ಟು ವರ್ಷ ವಾಡಾ ಮತ್ತು ಭಾರತದಲ್ಲಿರುವ ಅದರ ಅಂಗಸಂಸ್ಥೆ ನಾಡಾದ ಸೂಚನೆ, ಮನವಿಗಳನ್ನು ಧಿಕ್ಕರಿಸುತ್ತಲೇ ಬಂದಿದ್ದ ಬಿಸಿಸಿಐ ತನ್ನ ನಿಲುವು ಬದಲಿಸಿದ್ದು ಅಚ್ಚರಿ ಮೂಡಿಸಿದೆ. ಜಗತ್ತಿನ ಅತ್ಯಂತ ಶ್ರೀಮಂತ ಕ್ರಿಕೆಟ್‌ ಮಂಡಳಿಯು ವಾಡಾ ಮತ್ತು ಅಂತರರಾಷ್ಟ್ರೀಯ ಕ್ರಿಕೆಟ್‌ ಸಮಿತಿಯ (ಐಸಿಸಿ) ಒತ್ತಡಕ್ಕೆ ಮಣಿದಿದೆ ಎಂದೇ ಹೇಳಲಾಗುತ್ತಿದೆ. ಬಿಸಿಸಿಐ ಅಧಿಕಾರಿಗಳು ಕಳೆದ ವಾರ ಐಸಿಸಿ ಅಧ್ಯಕ್ಷ ಶಶಾಂಕ್ ಮನೋಹರ್‌ ಜತೆ ಚರ್ಚಿಸಿದ ನಂತರ ನಾಡಾ ಜತೆ ಕಾರ್ಯನಿರ್ವಹಿಸಲು ಒಪ್ಪಿಗೆ ಸೂಚಿಸಿದ್ದಾರೆ. ವಿರೋಧಿಸಿದ್ದು ಏಕೆ?: ನಾಡಾ ಸಾಮರ್ಥ್ಯದ ಬಗ್ಗೆ ಅನುಮಾನ ಇರುವುದರಿಂದಲೇ ಬಿಸಿಸಿಐ ಉದ್ದೀಪನಾ ಮದ್ದು ಪರೀಕ್ಷೆಯಿಂದ ತನ್ನ ಆಟಗಾರರನ್ನು ದೂರವಿರಿಸಿಕೊಂಡಿತ್ತು. ಕ್ರೀಡಾಪಟುಗಳ ರಕ್ತ ಹಾಗೂ ಮೂತ್ರದ ಸ್ಯಾಂಪಲ್‌ಗಳನ್ನು ಸಂಗ್ರಹಿಸುವ ನಾಡಾ ಅಧಿಕಾರಿಗಳ ಮೇಲೆ ವಿಶ್ವಾಸವಿಲ್ಲ ಎಂದಿತ್ತು. ಕ್ರೀಡಾಪಟುಗಳಿಂದ ಸಂಗ್ರಹಿಸಿದ ಮಾದರಿಗಳನ್ನು ಅಸಮರ್ಪಕವಾಗಿ ನಿಭಾಯಿಸಲಾಗುತ್ತಿದೆ ಎಂಬುದು ಮಂಡಳಿಯ ದೂರು. ಈ ಕಾರಣ ಬಿಸಿಸಿಐ ಈಗ ತನ್ನ ಆಟಗಾರರ ಸ್ಯಾಂಪಲ್‌ಗಳನ್ನು ಸ್ವೀಡನ್‌ನ ಇಂಟರ್‌ನ್ಯಾಷನಲ್‌ ಡೋಪಿಂಗ್‌ ಟೆಸ್ಟ್‌ ಅಂಡ್‌ ಮ್ಯಾನೇಜ್‌ಮೆಂಟ್ (ಐಡಿಟಿಎಂ) ಸಂಸ್ಥೆ ಮೂಲಕ ಸಂಗ್ರಹಿಸಿ ನವದೆಹಲಿಯ ರಾಷ್ಟ್ರೀಯ ಉದ್ದೀಪನಾ ಮದ್ದು ಪರೀಕ್ಷಾ ಪ್ರಯೋಗಾಲಯಕ್ಕೆ (ಎನ್‌ಡಿಟಿಎಲ್) ಕಳುಹಿಸಿಕೊಡುತ್ತಿತ್ತು. ಈ ಮೂಲಕ ನಾಡಾವನ್ನು ಉದ್ದೀಪನಾ ಮದ್ದು ಪರೀಕ್ಷೆಯ ಇಡೀ ಪ್ರಕ್ರಿಯೆಯಿಂದಲೇ ಹೊರಗೆ ಇಟ್ಟಿತ್ತು. ಇದೀಗ ಮಾಡಿರುವ ಒಪ್ಪಂದದಲ್ಲೂ ಬಿಸಿಸಿಐ ತನ್ನ ಪ್ರತಿನಿಧಿ ಮೂಲಕವೇ ಸ್ಯಾಂಪಲ್‌ಗಳನ್ನು ಸಂಗ್ರಹಿಸಿ ನಾಡಾಕ್ಕೆ ನೀಡಲು ನಿರ್ಧರಿಸಿದೆ. ಈ ಷರತ್ತುಗಳನ್ನು ನಾಡಾ ಒಪ್ಪಿಕೊಳ್ಳಲಿದೆಯೇ ಎಂಬುದು ಖಚಿತವಾಗಿಲ್ಲ. ‘ಸ್ಯಾಂಪಲ್‌ಗಳನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸುವಲ್ಲಿ ನಾಡಾ ಎಡವಿದ್ದಕ್ಕೆ ಹಲವು ಉದಾಹರಣೆಗಳಿವೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಅತ್ಯುತ್ತಮ ಹೆಸರು ಹೊಂದಿರುವ ವಿರಾಟ್‌ ಕೊಹ್ಲಿ, ಮಹೇಂದ್ರ ಸಿಂಗ್‌ ಧೋನಿ ಅವರಂತಹ ಆಟಗಾರರು ನಮ್ಮಲ್ಲಿದ್ದಾರೆ.ಅಂತಹ ಆಟಗಾರರಿಂದ ಪಡೆದ ಮಾದರಿಗಳನ್ನು ನಿರ್ವಹಿಸುವಲ್ಲಿ ಎಡವಿದರೆ ಯಾರು ಹೊಣೆ’ ಎಂಬುದು ಬಿಸಿಸಿಐ ಅಧಿಕಾರಿಗಳ ಪ್ರಶ್ನೆ. ನಾಡಾದ ನಿಯಮಗಳನ್ನು ಬಿಸಿಸಿಐ ಎಷ್ಟರಮಟ್ಟಿಗೆ ಒಪ್ಪಿಕೊಂಡಿದೆ ಎಂಬುದು ಸ್ಪಷ್ಟವಾಗಿಲ್ಲ. ವಾಡಾ ನಿಯಮಕ್ಕೆ ಬದ್ಧವಾಗಿರಬೇಕಾದರೆ ರಾಷ್ಟ್ರೀಯ ಕ್ರೀಡಾ ಸಂಸ್ಥೆಯೊಂದು ಪ್ರತಿವರ್ಷ ಶೇ 10 ರಷ್ಟು ಸ್ಯಾಂಪಲ್‌ಗಳನ್ನು ಪರೀಕ್ಷೆಗೆ ನೀಡಬೇಕು. ಬಿಸಿಸಿಐ ಈ ನಿಯಮಕ್ಕೆ ಬದ್ಧವಾಗಿರುವುದೇ ಎಂಬುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ರಾಷ್ಟ್ರೀಯ ತಂಡ ಮತ್ತು ದೇಸಿ ಟೂರ್ನಿಗಳಲ್ಲಿ ಆಡುವ ಆಟಗಾರರ ಉದ್ದೀಪನಾ ಮದ್ದು ಪರೀಕ್ಷೆಯನ್ನು ಈಗಿನ ರೀತಿಯಲ್ಲಿ ಐಡಿಟಿಎಂ ಮೂಲಕ ನಡೆಸಿ, ಕೇವಲ 23 ವರ್ಷ ವಯಸ್ಸಿನೊಳಗಿನ ಆಟಗಾರರನ್ನು ಮಾತ್ರ ನಾಡಾ ಮೂಲಕ ಪರೀಕ್ಷೆಗೆ ಒಳಪಡಿಸಲು ಬಿಸಿಸಿಐ ತೀರ್ಮಾನಿಸಿದೆ ಎಂಬ ಮಾತುಗಳೂ ಕೇಳಿಬರುತ್ತಿದೆ. ಒಲಿಂಪಿಕ್ಸ್‌ ಹಾದಿ ಸುಗಮ: ಬಿಸಿಸಿಐ ನಿರ್ಧಾರದಿಂದಾಗಿ ಒಲಿಂಪಿಕ್‌ ಕ್ರೀಡಾಕೂಟದಲ್ಲಿ ಕ್ರಿಕೆಟ್‌ಗೆ ಅವಕಾಶ ಲಭಿಸುವ ಹಾದಿ ಸುಗಮವಾಗಿದೆ. ಟ್ವೆಂಟಿ–20 ಕ್ರಿಕೆಟ್‌ಅನ್ನು ಒಲಿಂಪಿಕ್ಸ್‌ ನಲ್ಲಿ ಸೇರಿಸಲು ಐಸಿಸಿ ಕೆಲ ವರ್ಷ ಗಳಿಂದ ಪ್ರಯತ್ನ ನಡೆಸುತ್ತಲೇ ಇದೆ. ಆದರೆ ಅಂತರರಾಷ್ಟ್ರೀಯ ಒಲಿಂಪಿಕ್ಸ್‌ ಸಮಿತಿ ಇನ್ನೂ ಒಪ್ಪಿಗೆ ನೀಡಿಲ್ಲ. ಕ್ರಿಕೆಟ್‌ಅನ್ನು ಒಲಿಂಪಿಕ್ಸ್‌ಗೆ ಪರಿಗಣಿಸದೇ ಇರುವುದಕ್ಕೆ ನಾಡಾ ಮತ್ತು ಬಿಸಿಸಿಐ ನಡುವಿನ ಜಟಾಪಟಿಯೂ ಒಂದು ಕಾರಣವಾಗಿತ್ತು. ಬಿಸಿಸಿಐನ ನಿರ್ಧಾರದಿಂದ ಇದೀಗ ಐಸಿಸಿಯು ‘ವಾಡಾ ನಿಯಮವನ್ನು ಪೂರ್ಣವಾಗಿ ಒಪ್ಪಿಕೊಂಡ’ ಸಂಸ್ಥೆ ಎನಿಸಿಕೊಂಡಿದೆ. ಕ್ರಿಕೆಟ್‌ ಕ್ರೀಡೆಗೆ ಒಲಿಂಪಿಕ್ಸ್‌ನಲ್ಲಿ ಸ್ಥಾನ ಗಳಿಸಲು ಐಸಿಸಿಯು ವಾಡಾ ವ್ಯಾಪ್ತಿಗೆ ಬರುವುದು ಮುಖ್ಯವಾಗಿತ್ತು. ಬಿಸಿಸಿಐನ ಹಟದ ನಿಲುವಿನಿಂದಾಗಿ ಐಸಿಸಿಗೆ ಇದುವರೆಗೆ ಪೂರ್ಣವಾಗಿ ವಾಡಾ ವ್ಯಾಪ್ತಿಯಡಿ ಬರಲು ಆಗಿರಲಿಲ್ಲ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.