ಭಾರತಕ್ಕೆ ಸುಲಭ ಜಯದ ಕನಸು ಇಫೊ, ಮಲೇಷ್ಯಾ: ಸುಲ್ತಾನ್‌ ಅಜ್ಲಾನ್‌ ಶಾ ಕಪ್‌ ಹಾಕಿ ಟೂರ್ನಿಯಲ್ಲಿ ಈಗಾಗಲೇ ಫೈನಲ್ ಪ್ರವೇಶಿಸಿರುವ ಭಾರತ ತಂಡ ಈಗ ಮತ್ತೊಂದು ಗೆಲುವಿನ ಮೇಲೆ ಕಣ್ಣಿಟ್ಟಿದೆ. ಶುಕ್ರವಾರ ನಡೆಯುವ ತನ್ನ ಅಂತಿಮ ಲೀಗ್‌ ಪೈಪೋಟಿಯಲ್ಲಿ ಮನಪ್ರೀತ್‌ ಸಿಂಗ್‌ ಬಳಗ ಪೋಲೆಂಡ್‌ ಸವಾಲು ಎದುರಿಸಲಿದೆ. ಭಾರತ ತಂಡ ಈ ಬಾರಿ ಆಡಿರುವ ನಾಲ್ಕು ಪಂದ್ಯಗಳ ಪೈಕಿ ಮೂರರಲ್ಲಿ ಗೆದ್ದು ಒಂದು ಪಂದ್ಯವನ್ನು ಡ್ರಾ ಮಾಡಿಕೊಂಡಿದೆ. ಒಟ್ಟು 10 ಪಾಯಿಂಟ್ಸ್‌ ಕಲೆಹಾಕಿರುವ ಮನಪ್ರೀತ್‌ ಪಡೆ ಪಾಯಿಂಟ್ಸ್‌ ಪಟ್ಟಿಯಲ್ಲಿ ಅಗ್ರಸ್ಥಾನ ಹೊಂದಿದೆ. ಭಾರತ ತಂಡ ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದರೆ, ಪೋಲೆಂಡ್‌ 21ನೇ ಸ್ಥಾನ ಹೊಂದಿದೆ. ಹೀಗಾಗಿ ಶುಕ್ರವಾರದ ಹಣಾಹಣಿಯಲ್ಲಿ ಮನಪ್ರೀತ್‌ ಬಳಗ ಸುಲಭವಾಗಿ ಗೆಲ್ಲಬಹುದು ಎಂದೇ ಭಾವಿಸಲಾಗಿದೆ. ಅನುಭವಿ ಆಟಗಾರರ ಅನುಪಸ್ಥಿತಿಯಲ್ಲಿ ತಂಡದಲ್ಲಿ ಸ್ಥಾನ ಪಡೆದಿರುವ ಯುವ ಆಟಗಾರರು ಟೂರ್ನಿಯಲ್ಲಿ ಉತ್ತಮ ಸಾಮರ್ಥ್ಯ ತೋರಿದ್ದಾರೆ.‌ ತಂಡವು ಒಟ್ಟು 14 ಗೋಲುಗಳನ್ನು ಗಳಿಸಿರುವುದು ಇದಕ್ಕೆ ಸಾಕ್ಷಿ. ಕೆನಡಾ ಎದುರಿನ ಹಿಂದಿನ ಪಂದ್ಯದಲ್ಲಿ ‘ಹ್ಯಾಟ್ರಿಕ್‌’ ಗೋಲು ಗಳಿಸಿದ್ದ ಮನದೀಪ್‌ ಸಿಂಗ್‌ ಈ ಪಂದ್ಯದ ಆಕರ್ಷಣೆಯಾಗಿದ್ದಾರೆ. 24 ವರ್ಷದ ಈ ಆಟಗಾರ ನಾಲ್ಕು ಪಂದ್ಯಗಳಿಂದ ಐದು ಗೋಲು ದಾಖಲಿಸಿದ್ದಾರೆ. ಉತ್ತಮ ಲಯದಲ್ಲಿರುವ ಮನದೀಪ್‌, ಪೋಲೆಂಡ್‌ ರಕ್ಷಣಾ ಕೋಟೆಯನ್ನೂ ಧ್ವಂಸಗೊಳಿಸಲು ಉತ್ಸುಕರಾಗಿದ್ದಾರೆ. ಪೆನಾಲ್ಟಿ ಕಾರ್ನರ್‌ ಪರಿಣತ ಆಟಗಾರ ವರುಣ್‌ ಕುಮಾರ್‌ ಕೂಡಾ ಮಿಂಚಲು ತುದಿಗಾಲಿನಲ್ಲಿ ನಿಂತಿದ್ದಾರೆ. ಸಿಮ್ರನ್‌ಜೀತ್‌ ಸಿಂಗ್‌, ಸುರೇಂದರ್‌ ಕುಮಾರ್‌, ನೀಲಕಂಠ ಶರ್ಮಾ, ಹಾರ್ದಿಕ್‌ ಸಿಂಗ್‌, ಅಮಿತ್‌ ರೋಹಿದಾಸ್‌ ಮತ್ತು ಸುಮಿತ್ ಕುಮಾರ್‌ ಅವರ ಬಲವೂ ಭಾರತಕ್ಕಿದೆ. ಪೋಲೆಂಡ್‌ ತಂಡ ಈ ಬಾರಿಯ ಟೂರ್ನಿಯಲ್ಲಿ ಆಡಿರುವ ನಾಲ್ಕು ಪಂದ್ಯಗಳಲ್ಲೂ ಸೋತಿದೆ. ಈ ಪಂದ್ಯದಲ್ಲಿ ಭಾರತಕ್ಕೆ ಆಘಾತ ನೀಡಿ ಗೆಲುವಿನೊಂದಿಗೆ ಅಭಿಯಾನ ಮುಗಿಸಲು ತಂಡ ಕಾತರವಾಗಿದೆ. ಮೊದಲ ಹಣಾಹಣಿಯಲ್ಲಿ 1–5 ಗೋಲುಗಳಿಂದ ಮಲೇಷ್ಯಾಕ್ಕೆ ಮಣಿದಿದ್ದ ಈ ತಂಡ ನಂತರ ಕೆನಡಾ (0–4) ಮತ್ತು ಜಪಾನ್‌ (0–3) ಎದುರು ಪರಾಭವಗೊಂಡಿತ್ತು. ದಕ್ಷಿಣ ಕೊರಿಯಾ ಎದುರು ಮಾತ್ರ ದಿಟ್ಟ ಆಟ ಆಡಿದ್ದ ಈ ತಂಡ ಎರಡು ಗೋಲು ಗಳಿಸಿ ಗಮನ ಸೆಳೆದಿತ್ತು. ದಿನದ ಇನ್ನೊಂದು ಪಂದ್ಯದಲ್ಲಿ ದಕ್ಷಿಣ ಕೊರಿಯಾ ತಂಡ ಜಪಾನ್‌ ಎದುರು ಸೆಣಸಲಿದ್ದು, ಮಲೇಷ್ಯಾ ತಂಡ ಕೆನಡಾ ವಿರುದ್ಧ ಆಡಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.