ಕ್ವಾರ್ಟರ್‌ಗೆ ಪ್ರಣೀತ್, ಕಶ್ಯಪ್‌ ನವದೆಹಲಿ: ಭಾರತದ ಬಿ.ಸಾಯಿ ಪ್ರಣೀತ್ ಮತ್ತು ಪರುಪಳ್ಳಿ ಕಶ್ಯಪ್‌ ಇಲ್ಲಿ ನಡೆಯುತ್ತಿರುವ ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಕ್ವಾರ್ಟರ್ ಫೈನಲ್‌ ಪ್ರವೇಶಿಸಿದ್ದಾರೆ. ಗುರುವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಪಂದ್ಯಗಳಲ್ಲಿ ಪ್ರಣೀತ್‌ ಭಾರತದವರೇ ಆದ ಸಮೀರ್‌ ವರ್ಮಾ ಎದುರು 18–21, 21–16, 21–15ರಿಂದ ಗೆದ್ದರು. ಕಶ್ಯಪ್‌ ಥಾಯ್ಲೆಂಡ್‌ನ ನೊನ್ಸಾಕ್‌ ಸೆನ್ಸೊಬೂನ್ಸುಕ್‌ ಅವರನ್ನು 21–11, 21–13ರಿಂದ ಸೋಲಿಸಿದರು. ಈ ತಿಂಗಳ ಆರಂಭದಲ್ಲಿ ನಡೆದಿದ್ದ ಸ್ವಿಸ್ ಓಪನ್ ಟೂರ್ನಿಯ ಫೈನಲ್ ಪ್ರವೇಶಿಸಿದ್ದ ಸಾಯಿ ಪ್ರಣೀತ್‌ ಗುರುವಾರದ ಪಂದ್ಯದ ಮೊದಲ ಗೇಮ್‌ನಲ್ಲಿ ಹಿನ್ನಡೆ ಅನುಭವಿಸಿದರು. ಆದರೆ ನಂತರ ಸಿಡಿದೆದ್ದು ಗೆಲುವು ತಮ್ಮದಾಗಿಸಿಕೊಂಡರು. ಗೋಪಿಚಂದ್‌ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿರುವ ಇಬ್ಬರು ಆಟಗಾರರು ಈ ಹಿಂದೆ ಐದು ಬಾರಿ ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಮುಖಾಮುಖಿಯಾಗಿದ್ದಾಗ ಸಾಯಿ 3–2ರಿಂದ ಮೇಲುಗೈ ಸಾಧಿಸಿದ್ದರು. ಆದರೆ ದೇಶಿ ಟೂರ್ನಿಗಳಲ್ಲಿ ಅವರು ಸಮೀರ್‌ಗೆ ಅನೇಕ ಬಾರಿ ಮಣಿದಿದ್ದರು. ‘ನಮಗಿಬ್ಬರಿಗೂ ಪರಸ್ಪರರ ಸಾಮರ್ಥ್ಯ ಮತ್ತು ದೌರ್ಬಲ್ಯ ಚೆನ್ನಾಗಿ ಗೊತ್ತು. ಹೀಗಾಗಿ ಉತ್ತಮ ಯೋಜನೆಗಳೊಂದಿಗೆ ಕಣಕ್ಕೆ ಇಳಿದಿದ್ದೆವು. ಪಂದ್ಯದಲ್ಲಿ ನಾನು ಗೆದ್ದೆ’ ಎಂದು ಸಾಯಿ ಪ್ರಣೀತ್ ಹೇಳಿದರು. ಪುರುಷ–ಮಹಿಳಾ ಡಬಲ್ಸ್‌ ಜೋಡಿಗೆ ಜಯ: ಮಹಿಳೆಯರ ಸಿಂಗಲ್ಸ್‌ನಲ್ಲಿ ರಿಯಾ ಮುಖರ್ಜಿ ಅಮೋಘ ಆಟವಾ ಡಿದರು. ಆದರೆ ಡೆನ್ಮಾರ್ಕ್‌ನ ಮಿಯಾ ಬ್ಲಿಂಚ್‌ಫೆಲ್ಟ್‌ಗೆ 6–21, 21–17, 13–21ರಿಂದ ಮಣಿದರು. ಪುರುಷರ ಡಬಲ್ಸ್ ಜೋಡಿ ಪ್ರಣವ್ ಜೆರಿ ಚೋಪ್ರಾ ಮತ್ತು ಶಿವಂ ಶರ್ಮಾ ಭಾರತದವರೇ ಆದ ಅನಿರುದ್ಧ ಮಾಯಕಾರ್ ಮತ್ತು ವಿನಯ್‌ ಕುಮಾರ್ ಸಿಂಗ್ ಅವರನ್ನು 21–15, 21–11ರಿಂದ ಸೋಲಿಸಿದರು. ಮಹಿಳೆಯರ ಡಬಲ್ಸ್‌ನಲ್ಲಿ ಅ‍ಪರ್ಣಾ ಬಾಲನ್ ಮತ್ತು ಶ್ರುತಿ ಕೆ.ಪಿ ಹಾಂಕಾಂಗ್‌ನ ವಿಂಗ್‌ ಯಂಗ್‌ ಮತ್ತು ಯಾಂಗ್ ನಾ ಟಿಂಗ್ ಜೋಡಿಯನ್ನು 21–19, 7–21, 21–17ರಿಂದ ಮಣಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.